ADVERTISEMENT

ದೀದಿ ಧಮಾಕ ಮತ್ತು ಕಾಂಗ್ರೆಸ್ ದ್ವಂದ್ವ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2019, 19:56 IST
Last Updated 6 ಫೆಬ್ರುವರಿ 2019, 19:56 IST
ಕಾರ್ಟೂನ್
ಕಾರ್ಟೂನ್   

ಕೋಲ್ಕತ್ತ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಜೆಪಿ ವಿರುದ್ಧ ಇತರ ಪಕ್ಷಗಳನ್ನು ಒಗ್ಗೂಡಿಸಲು ಹೊರಟ ಕೂಡಲೇ ಕಾಂಗ್ರೆಸ್‌ ಪಕ್ಷವು ದ್ವಂದ್ವದಲ್ಲಿ ಸಿಕ್ಕಿಕೊಳ್ಳುವಂತೆ ಕಾಣಿಸುತ್ತದೆ.

ಮಮತಾ ಅವರು ಬಿಜೆಪಿ ವಿರೋಧಿ ಪಕ್ಷಗಳ ದೊಡ್ಡ ಸಮಾವೇಶವನ್ನು ಕೋಲ್ಕತ್ತದಲ್ಲಿ ಜನವರಿಯಲ್ಲಿ ನಡೆಸಿದರು. ಅದಕ್ಕೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಬೆಂಬಲ ಕೊಟ್ಟಿದ್ದರು. ಸಿಬಿಐ ವಿರುದ್ಧ ಮಮತಾ ಈ ವಾರ ನಡೆಸಿದ ಭಾರಿ ಸಂಘರ್ಷಕ್ಕೂ ರಾಹುಲ್‌ ಬೆಂಬಲ ಕೊಟ್ಟಿದ್ದಾರೆ.

ಇದು ಪಶ್ಚಿಮ ಬಂಗಾಳ ಕಾಂಗ್ರೆಸ್ ಘಟಕವು ಮಮತಾ ಅವರ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷದ ಬಗ್ಗೆ ಹೊಂದಿರುವ ನಿಲುವಿಗೆ ವಿರುದ್ಧವಾದ ನಡೆ. ರಾಹುಲ್‌ ಅವರ ನಡೆಯು ಟಿಎಂಸಿ ಬಗ್ಗೆ ತಮ್ಮ ಪಕ್ಷದ ಹೈಕಮಾಂಡ್‌ ನಿಲುವೇನು ಎಂಬ ಗೊಂದಲವನ್ನು ರಾಜ್ಯ ಘಟಕದಲ್ಲಿ ಮೂಡಿಸಿದೆ.

ADVERTISEMENT

ಕೋಲ್ಕತ್ತ ಪೊಲೀಸ್‌ ಕಮಿಷನರ್‌ ರಾಜೀವ್‌ ಕುಮಾರ್‌ ಅವರು ಸಿಬಿಐ ವಿಚಾರಣೆಯಿಂದ ‘ತಪ್ಪಿಸಿಕೊಳ್ಳುತ್ತಿದ್ದಾರೆ’ ಎಂದು ಪಶ್ಚಿಮ ಬಂಗಾಳ ಕಾಂಗ್ರೆಸ್‌ ಅಧ್ಯಕ್ಷ ಸೋಮೇನ್‌ ಮಿತ್ರಾ ಆರೋಪಿಸಿದ್ದರು. ರಾಜೀವ್‌ ಅವರನ್ನು ವಿಚಾರಣೆ ನಡೆಸಲು ಬಂದ ಸಿಬಿಐ ವಿರುದ್ಧ ಮಮತಾ ನಡೆಸಿದ ಹೋರಾಟಕ್ಕೆ ರಾಹುಲ್‌ ಬೆಂಬಲ ಕೊಟ್ಟಿದ್ದಾರೆ.

ಶಾರದಾ ಮತ್ತು ರೋಸ್‌ ವ್ಯಾಲಿ ಚಿಟ್‌ ಫಂಡ್‌ ಹಗರಣಗಳ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು ಎಂದು ಒತ್ತಾಯಿಸಿ ಕೋಲ್ಕತ್ತದಲ್ಲಿ ದೊಡ್ಡ ರ‍್ಯಾಲಿಯನ್ನು ಕಾಂಗ್ರೆಸ್‌ ಪಕ್ಷ ಬುಧವಾರ ನಡೆಸಿದೆ. ರಾಜೀವ್‌ ಅವರನ್ನು ರಕ್ಷಿಸುತ್ತಿರುವುದಕ್ಕೆ ಮಮತಾ ವಿರುದ್ಧ ಈ ರ‍್ಯಾಲಿಯಲ್ಲಿ ಮಿತ್ರಾ ಹರಿಹಾಯ್ದಿದ್ದಾರೆ. ಇದು ಪಕ್ಷದ ಹೈಕಮಾಂಡ್‌ನ ನಿಲುವೇನು ಎಂಬುದನ್ನು ಮತ್ತಷ್ಟು ಗೊಂದಲಕ್ಕೆ ತಳ್ಳಿದೆ.

‘ಜವಾಬ್ದಾರಿಯುತ ಅಧಿಕಾರಿಯೊಬ್ಬರ (ರಾಜೀವ್‌) ಮನೆಗೆ ಸಿಬಿಐ ಅಧಿಕಾರಿಗಳು ಬಂದದ್ದೇಕೆ? ಹಾಗೆ ಬಂದಾಗ ಅವರು ಸಿಬಿಐ ಅಧಿಕಾರಿಗಳೇ ಅಲ್ಲ ಎಂದು ಈ ಅಧಿಕಾರಿ ಸಾಧಿಸಬಹುದಿತ್ತಲ್ಲವೇ? ಅವರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದೇಕೆ? ಆ ವ್ಯಕ್ತಿಯನ್ನು ರಕ್ಷಿಸುವುದಕ್ಕಾಗಿ ಮುಖ್ಯಮಂತ್ರಿಯವರು ಎಂದೂ ಇಲ್ಲದ ರೀತಿಯಲ್ಲಿ ನಡೆದುಕೊಂಡರು. ಎಲ್ಲ ಶಿಷ್ಟಾಚಾರಗಳನ್ನು ಬದಿಗೊತ್ತಿ ಪೊಲೀಸ್‌ ಕಮಿಷನರ್‌ ಮನೆಗೆ ಧಾವಿಸಿದರು, ಅಲ್ಲಿಯೇ ಸಭೆ ನಡೆಸಿದರು ಮತ್ತು ಧರಣಿ ನಡೆಸುವ ನಿರ್ಧಾರ ಕೈಗೊಂಡರು’ ಎಂದು ಮಿತ್ರಾ ಹೇಳಿದ್ದಾರೆ.

‘ಹಗರಣದಲ್ಲಿ ಇನ್ನಷ್ಟು ದೊಡ್ಡ ಹೆಸರುಗಳು ಇವೆ ಎಂದು ನಾವು ಭಾವಿಸಬೇಕೇ’ ಎಂದು ಅವರು ಪ್ರಶ್ನಿಸಿದ್ದಾರೆ. ಮಮತಾ ಧರಣಿ ನಡೆಸುತ್ತಿದ್ದಾಗ ಆ ಅಧಿಕಾರಿ ಅಲ್ಲಿಗೆ ಯಾಕೆ ಹೋಗಿದ್ದರು ಎಂದೂ ಮಿತ್ರಾ ಕೇಳಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಸಿಪಿಎಂ ನೇತೃತ್ವದ ಎಡರಂಗದ ಜತೆಗೆ ಮೈತ್ರಿ ಮಾಡಿಕೊಳ್ಳಲು ರಾಜ್ಯ ಘಟಕಕ್ಕೆ ಆಸಕ್ತಿ ಇದೆ. ಆದರೆ, ಟಿಎಂಸಿಗೆ ಕಾಂಗ್ರೆಸ್‌ ಹೈಕಮಾಂಡ್‌ ಬೆಂಬಲ ಹೀಗೆಯೇ ಮುಂದುವರಿದರೆ ಸಿಪಿಎಂ ದೂರ ಸರಿಯಬಹುದು ಎಂಬುದು ರಾಜ್ಯ ಕಾಂಗ್ರೆಸ್‌ ಮುಖಂಡರ ಆತಂಕ.

ಕಾಂಗ್ರೆಸ್‌ ಮತ್ತು ಸಿಪಿಎಂ ನಡುವಣ ಸಂಬಂಧ ಈಗ ಅಷ್ಟೇನೂ ಚೆನ್ನಾಗಿಲ್ಲ. 2016ರ ವಿಧಾನಸಭೆ ಚುನಾವಣೆ ಬಳಿಕ ಸಿಪಿಎಂ ತನ್ನನ್ನು ನಿರ್ಲಕ್ಷಿಸಿದೆ ಎಂಬ ನೋವು ಕಾಂಗ್ರೆಸ್‌ ಪಕ್ಷದಲ್ಲಿದೆ. ತನ್ನ ಬದ್ಧ ಪ್ರತಿಸ್ಪರ್ಧಿ ಮಮತಾ ಅವರಿಗೆ ಕಾಂಗ್ರೆಸ್‌ ಪಕ್ಷವು ಮತ್ತೆ ಮತ್ತೆ ಬೆಂಬಲ ನೀಡುವುದು ಸರಿಯಲ್ಲ ಎಂಬುದು ಸಿಪಿಎಂನ ಭಾವನೆ.

‘ರಾಷ್ಟ್ರ ರಾಜಕಾರಣದ ಲೆಕ್ಕಾಚಾರದಲ್ಲಿ, ಬಿಜೆಪಿ ವಿರುದ್ಧ ಟಿಎಂಸಿಯನ್ನು ಬೆಂಬಲಿಸದೆ ಹೈಕಮಾಂಡ್‌ಗೆ ಬೇರೆ ದಾರಿಯೇ ಇಲ್ಲ. ಆದರೆ, ಇದು ಪಶ್ಚಿಮ ಬಂಗಾಳದಲ್ಲಿ ಗೊಂದಲ ಸೃಷ್ಟಿಲಿಸಲಿದೆ’ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

ದುರ್ಬಳಕೆ ಸಂಬಂಧ ವಾಟ್ಸ್‌ಆ್ಯಪ್‌ನ ಯಾವುದೇ ಅಧಿಕಾರಿ ಈವರೆಗೆ ನಮ್ಮನ್ನು ಸಂಪರ್ಕಿಸಿಲ್ಲ. ಹೀಗಾಗಿ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ
- ಅಮಿತ್ ಮಾಳವೀಯ, ಬಿಜೆಪಿಯ ಮಾಹಿತಿ ತಂತ್ರಜ್ಞಾನ ಘಟಕದ ಮುಖ್ಯಸ್ಥ

**

ನಮ್ಮ ಪಕ್ಷ ವಾಟ್ಸ್‌ಆ್ಯಪ್‌ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿಲ್ಲ. ಚುನಾವಣೆ ಉದ್ದೇಶದಿಂದ ಮುಂದೆಯೂ ದುರ್ಬಳಕೆ ನಡೆಯುವುದಿಲ್ಲ
- ದಿವ್ಯ ಸ್ಪಂದನಾ (ನಟಿ ರಮ್ಯಾ), ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ಘಟಕದ ಮುಖ್ಯಸ್ಥೆ

**

ಮುಖ್ಯಾಂಶಗಳು

* ವಾಟ್ಸ್‌ಆ್ಯಪ್‌ಗೆ ವಿಶ್ವದಲ್ಲಿ ಭಾರತವೇ ಅತ್ಯಂತ ದೊಡ್ಡ ಮಾರುಕಟ್ಟೆ

* 20 ಕೋಟಿಗೂ ಹೆಚ್ಚು ಭಾರತೀಯರು ವಾಟ್ಸ್‌ಆ್ಯಪ್‌ ಬಳಸುತ್ತಿದ್ದಾರೆ

* ದುರ್ಬಳಕೆ ತಡೆಗೆ ಈಗಾಗಲೇ ಹಲವು ಕ್ರಮ ತೆಗೆದುಕೊಂಡಿರುವ ಕಂಪನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.