ADVERTISEMENT

ಕೋವಿಡ್‌ ವಾರಿಯರ್‌ಗಳ ಸುರಕ್ಷೆಗಾಗಿ ಕೇರಳದಲ್ಲಿ ನಿತ್ಯ ಕೊರೊನಾ ದೇವಿಯ ಪೂಜೆ!

ಪಿಟಿಐ
Published 14 ಜೂನ್ 2020, 10:26 IST
Last Updated 14 ಜೂನ್ 2020, 10:26 IST
ಕೊರೊನಾ ವೈರಸ್‌ ಚಿತ್ರಕ್ಕೆ ಪೂಜೆ ಸಲ್ಲಿಸುತ್ತಿರುವ ಅನಿಲನ್‌
ಕೊರೊನಾ ವೈರಸ್‌ ಚಿತ್ರಕ್ಕೆ ಪೂಜೆ ಸಲ್ಲಿಸುತ್ತಿರುವ ಅನಿಲನ್‌    

ಕೊಲ್ಲಂ, (ಕೇರಳ): ಕೊರೊನಾ ವೈರಸ್‌ನಿಂದ ಹರಡುವ ಸೋಂಕು ಮಹಾ ಮಾರಕ, ಅದರ ಅಟ್ಟಹಾಸಕ್ಕೆ ಜಗತ್ತೇ ತಲ್ಲಣಸಿದೆ. ಆದರೆ, ಕೇರಳದ ಕೊಲ್ಲಂ ಜಿಲ್ಲೆಯ ಕಡಕ್ಕಲ್‌ ನಿವಾಸಿ ಅನಿಲನ್‌ ಎಂಬುವವರು ಕೊರೊನಾ ವೈರಸ್‌ನ ಪ್ರತಿಕೃತಿ ಮಾಡಿ, ನಿತ್ಯವೂ ಅದಕ್ಕೆ ಪೂಜೆ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ.

ಥರ್ಮಕೋಲ್‌ನಿಂದ ಈ ವೈರಸ್‌ನ ಪ್ರತಿಕೃತಿ ನಿರ್ಮಿಸಿರುವ ಅನಿಲನ್‌ ಅದಕ್ಕೆ ‘ಕೊರೊನಾ ದೇವಿ’ ಎಂದು ಕರೆದಿದ್ದಾರೆ. ‘ಈ ಮಾರಕ ವೈರಸ್‌ ವಿರುದ್ಧ ಹೋರಾಡುತ್ತಿರುವ ಯೋಧರ ಯೋಗಕ್ಷೇಮಕ್ಕೆ ಪ್ರಾರ್ಥಿಸಿ, ನಿತ್ಯವೂ ಕೊರೊನಾ ದೇವಿಗೆ ಪೂಜೆ ಸಲ್ಲಿಸುತ್ತಿದ್ದೇನೆ’ ಎಂದು ಅನಿಲನ್‌ ಹೇಳುತ್ತಾರೆ.

‘ಕೋವಿಡ್‌ ರೋಗಿಗಳ ಚಿಕಿತ್ಸೆಯಲ್ಲಿ ವೈದ್ಯರು, ಆರೋಗ್ಯ ಕಾರ್ಯಕರ್ತರು ನಿರತರಾಗಿದ್ದರೆ, ಇದಕ್ಕೆ ಪರಿಣಾಮಕಾರಿಯಾದ ಔಷಧಿ ಕಂಡು ಹಿಡಿಯಲು ವಿಜ್ಞಾನಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ, ಪೌರ ಕಾರ್ಮಿಕರು, ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ವಿವಿಧ ವರ್ಗದ ಜನರೂ ಈ ವೈರಸ್‌ ಸೋಂಕಿನ ವಿರುದ್ಧ ಹೋರಾಡುತ್ತಿದ್ದು, ಅವರೆಲ್ಲರೂ ಸುರಕ್ಷತವಾಗಿರಲಿ’ ಎಂದೂ ಪ್ರಾರ್ಥಿಸುತ್ತೇನೆ ಎನ್ನುತ್ತಾರೆ.

ADVERTISEMENT

‘ನಾನೂ ಈ ರೀತಿ ಪೂಜೆ ಮಾಡುವುದನ್ನು ನೋಡಿ ಅನೇಕ ಜನ ಅಪಹಾಸ್ಯ ಮಾಡಿದರು. ಆದರೆ, ಜನರಲ್ಲಿ ಕೋವಿಡ್‌ ಬಗ್ಗೆ ಜಾಗೃತಿ ಮೂಡಿಸಲು ನಾನು ಆಯ್ಕೆ ಮಾಡಿಕೊಂಡಿರುವ ಮಾರ್ಗ ಇದು’ ಎಂದು ಅವರು ತಮ್ಮ ಪೂಜಾ ಕೈಂಕರ್ಯವನ್ನು ಸಮರ್ಥಿಸಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.