ADVERTISEMENT

ಕುಟುಂಬದ ಸದಸ್ಯರೇ ನನಗೆ ಮತ ಹಾಕಿಲ್ಲ ಎಂದು ಕಣ್ಣೀರಿಟ್ಟ ಪಕ್ಷೇತರ ಅಭ್ಯರ್ಥಿ

​ಪ್ರಜಾವಾಣಿ ವಾರ್ತೆ
Published 24 ಮೇ 2019, 9:17 IST
Last Updated 24 ಮೇ 2019, 9:17 IST
   

ಜಲಂಧರ್: ಬಿಜೆಪಿ ಮತ್ತು ನರೇಂದ್ರ ಮೋದಿ ಭರ್ಜರಿ ಗೆಲುವು ಸಾಧಿಸಿ ಖುಷಿಯ ನಗು ಬೀರಿದಾಗ, ಚುನಾವಣೆಯಲ್ಲಿ ಪರಾಭವಗೊಂಡ ದುಃಖದಲ್ಲಿ ಮಾಧ್ಯಮಗಳ ಮುಂದೆ ಕಣ್ಣೀರಿಡುತ್ತಿರುವ ಪಕ್ಷೇತರ ಅಭ್ಯರ್ಥಿಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಪಂಜಾಬ್‌ನ ಜಲಂಧರ್‌ನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನೀಟು ಶಟ್ಟರನ್‌ವಾಲಾ ಮಾಧ್ಯಮಗಳ ಮುಂದೆ ಅಳುತ್ತಿರುವ ವಿಡಿಯೊ ಇದಾಗಿದೆ.

ಚುನಾವಣೆಯಲ್ಲಿ ಬಹುಮತದಿಂದ ಗೆಲ್ಲುತ್ತೇನೆ ಎಂಬ ಭರವಸೆಯಿಂದನೀಟು ಈ ಚುನಾವಣೆ ಸ್ಪರ್ಧಿಸಿರಲಿಲ್ಲ, ಆದರೆ ಚುನಾವಣಾ ಫಲಿತಾಂಶ ಪ್ರಕಟವಾದಾಗ ನೀಟು ಅವರಿಗೆ ಲಭಿಸಿದ ಮತಗಳ ಸಂಖ್ಯೆ 5! ಬರೀ 5 ಮತಗಳು ಸಿಕ್ಕಿದ್ದಕ್ಕೆ ಇವರು ಈ ರೀತಿ ಕಣ್ಣೀರು ಹಾಕಿದ್ದಾರಾ? ಅದೂ ಅಲ್ಲ. ನೀಟು ಕುಟುಂಬದಲ್ಲಿ 9 ಸದಸ್ಯರಿದ್ದಾರೆ. ಹೀಗಿದ್ದರೂ 5 ಮತ ಮಾತ್ರ ಸಿಕ್ಕಿದೆ.ಇನ್ನುನಾಲ್ಕು ಸದಸ್ಯರು ತನಗೆ ಮತ ಹಾಕಿಲ್ಲ ಎಂಬ ನೋವಿನಿಂದ ಅವರುಕಣ್ಣೀರು ಹಾಕಿದ್ದಾರೆ. ಇನ್ನು ಮುಂದೆ ತಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದಿದ್ದಾರೆ ನೀಟು.

ADVERTISEMENT

ನೀಟು ಮಾಧ್ಯಮಗಳ ಮುಂದೆ ಅಳುತ್ತಿರುವ ವಿಡಿಯೊ ವೈರಲ್ ಆಗುವುದರ ಜತೆಗೇ ಕುಟುಂಬದ ಸದಸ್ಯರೇ ಅಭ್ಯರ್ಥಿಗೆ ಮತ ಹಾಕಿಲ್ಲ ಎಂದು ಹಾಸ್ಯ ಮಾಡುವ ಹಲವಾರು ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ.

ನಿಜವಾಗಿಯೂ ಫಲಿತಾಂಶ ಪ್ರಕಟವಾದಾಗ ನೀಟು ಶಟ್ಟರನ್‌ವಾಲಾ ಅವರಿಗೆ ಸಿಕ್ಕಿದ ಮತ 856. ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ನೀಟು ಅವರಿಗೆ ಸಿಕ್ಕಿದ ಮತಗಳು 856 ಎಂದು ಇದೆ. ಆದರೆ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದಾಗ ತಮಗೆ ಕೇವಲ 5 ಮತಗಳು ಸಿಕ್ಕಿದೆ ಎಂದು ಬೇಸರದಿಂದ ನೀಟು ಕಣ್ಣೀರಿಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.