ADVERTISEMENT

ಇಂದೋರ್‌ನಿಂದ ವಿಮಾನ ಅಪಹರಿಸುವ ಬೆದರಿಕೆ: ವ್ಯಕ್ತಿ ಬಂಧನ

ಪಿಟಿಐ
Published 9 ಜೂನ್ 2021, 7:21 IST
Last Updated 9 ಜೂನ್ 2021, 7:21 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ಮತ್ತು ಇಂದೋರ್ ವಿಮಾನ ನಿಲ್ದಾಣಗಳಿಂದ ವಿಮಾನಗಳನ್ನು ಅಪಹರಿಸಿ ಪಾಕಿಸ್ತಾನಕ್ಕೆ ಕೊಂಡೊಯ್ಯುವದಾಗಿ ಬೆದರಿಕೆ ಹಾಕಿದ ಆರೋಪದಡಿ ರಾಜಾಭೋಜ್‌ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಈತ, ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಕರೆ ಮಾಡಿ, ವಿಮಾನ ಅಪಹರಿಸುವ ಬೆದರಿಕೆ ಹಾಕಿದ್ದ ಎಂದು ಭೋಪಾಲ್‌ನ ಗಾಂಧಿನಗರ ಪೊಲೀಸ್ ಠಾಣೆ ಉಸ್ತುವಾರಿ ಅರುಣ್ ಶರ್ಮಾ ಬುಧವಾರ ಸುದ್ದಿ ಸಂಸ್ಥೆಗೆ ತಿಳಿಸಿದರು.

ಈ ಬೆದರಿಕೆ ಕರೆ ಬಂದ ನಂತರ ವಿಮಾನ ನಿಲ್ದಾಣ ನಿರ್ವಹಣೆಯ ಅಧಿಕಾರಿಗಳು, ಗಾಂಧಿನಗರ ಪೊಲೀಸರಿಗೆ ದೂರು ನೀಡಿದರು.

ADVERTISEMENT

‘ವಿಮಾನಗಳನ್ನು ಅಪಹರಿಸುವುದಾಗಿ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಮಂಗಳವಾರ ತಡರಾತ್ರಿ ಶುಜಲ್ಪುರ ಪಟ್ಟಣದಲ್ಲಿ (ಭೋಪಾಲ್‌ನಿಂದ ಸುಮಾರು 100 ಕಿ.ಮೀ) ಬಂಧಿಸಿದ್ದೇವೆ. ಪ್ರಕರಣದ ತನಿಖೆಯ ಭಾಗವಾಗಿ ಆತನನ್ನು ತೀವ್ರವಾಗಿ ವಿಚಾರಣೆಗೆ ಒಳಪಡಿಸಲಾಗುತ್ತಿದೆ‘ ಎಂದು ಅಧಿಕಾರಿ ಹೇಳಿದ್ದಾರೆ.

ಬೆದರಿಕೆ ಕರೆಯ ನಂತರ ಭೋಪಾಲ್ ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಮತ್ತೊಬ್ಬ ಪೊಲೀಸ್‌ ಅಧಿಕಾರಿ ತಿಳಿಸಿದರು. ಭದ್ರತಾ ಸಿಬ್ಬಂದಿ ತೀವ್ರವಾಗಿ ಪರಿಶೀಲಿಸಿದ ನಂತರವೇ ಮಂಗಳವಾರ ಸಂಜೆ ಭೋಪಾಲ್‌ನಿಂದ ಮುಂಬೈಗೆ ತೆರಳುವ ವಿಮಾನಗಳು ಸಂಚಾರ ಆರಂಭಿಸಿದ್ದಾಗಿ ಪೊಲೀಸ್ ಅಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.