
ನವದೆಹಲಿ: ‘ಕಾಂಗ್ರೆಸ್‌ಗೆ ಒಬ್ಬ ಭಿನ್ನಮತೀಯನನ್ನು ಸಹಿಸಿಕೊಳ್ಳಲು ಸಾಧ್ಯವಾಗದಿದ್ದರೆ ಅದು ಆ ಪಕ್ಷದ ವಿನಾಶ ಎಂದರ್ಥ. ಹಾಗೆಯೇ, ಭಿನ್ನಮತ ವ್ಯಕ್ತಪಡಿಸುವ ವ್ಯಕ್ತಿಗೆ ಸಭ್ಯವಾಗಿಯೇ ದೃಢ ಭಾಷೆಯಲ್ಲಿ ಪ್ರತಿಕ್ರಿಯೆ ನೀಡಬಹುದು. ಆ ಧೈರ್ಯ ಪಕ್ಷಕ್ಕಿಲ್ಲದಿದ್ದರೆ, ಅದು ಆಡಳಿತ ನಡೆಸಲು ಅರ್ಹವಲ್ಲ’ ಎಂದು ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಕಾಂಗ್ರೆಸ್ ವಿರುದ್ಧ ಮಂಗಳವಾರ ವಾಗ್ದಾಳಿ ನಡೆಸಿದ್ದಾರೆ.
‘ಜಾತ್ಯತೀತ ಭಾರತ ಮಾತ್ರ ಉಳಿಯಲು ಸಾಧ್ಯ’ ಎಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು 1989ರಲ್ಲಿ ಸಂಸತ್ತಿನಲ್ಲಿ ಹೇಳಿದ್ದ ಮಾತುಗಳನ್ನು ಅಯ್ಯರ್ ನೆನಪಿಸಿಕೊಂಡಿದ್ದಾರೆ. ಅಲ್ಲದೆ, ಅದೇ ಮಾತುಗಳನ್ನು ಅವರ ಮಗ ರಾಹುಲ್ ಗಾಂಧಿ ಅವರಿಂದ ಪುನರಾವರ್ತಿಸುವಂತೆ ಕಾಂಗ್ರೆಸ್ ಹೈಕಮಾಂಡ್‌ಗೆ ಸವಾಲು ಹಾಕಿದ್ದಾರೆ.
‘ಭಿನ್ನಾಭಿಪ್ರಾಯಗಳು ಇರುವುದರಿಂದಲೇ ಕಾಂಗ್ರೆಸ್ ಜೀವಂತವಾಗಿದೆ ಹಾಗೂ ಬೆಳೆಯುತ್ತಿದೆ. ಇದೆಲ್ಲವೂ ವೇದಗಳ ಸಾರವಾದ ‘ದೇವನೊಬ್ಬ ನಾಮ ಹಲವು’ ಎಂಬುದಕ್ಕೆ ಸಂಬಂಧಿಸಿದೆ. ಕಾಂಗ್ರೆಸ್ ಕೂಡ ಒಂದೇ, ಆದರೆ ಅದನ್ನು ತಲುಪಲು ಅನೇಕ ಮಾರ್ಗಗಳಿವೆ. ದುರದೃಷ್ಟವಶಾತ್, ಈಗಿನ ನಾಯಕತ್ವವು ಈ ಪಾಠವನ್ನು ಮರೆತಂತಿದೆ’ ಎಂದು ಅಯ್ಯರ್ ತಮ್ಮ ‘ಮಣಿ ಟಾಕ್’ ಯೂಟ್ಯೂಬ್ ಸರಣಿಯಲ್ಲಿ ತಿಳಿಸಿದ್ದಾರೆ.
‘ಇಂದಿನ ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯಕ್ಕೆ ಅವಕಾಶ ಇಲ್ಲವೇ?’ ಎಂಬ ಶೀರ್ಷಿಕೆಯ 23 ನಿಮಿಷಗಳ ವಿಡಿಯೊದಲ್ಲಿ ಅವರು ಈ ರೀತಿ ಹೇಳಿದ್ದಾರೆ.
‘ಪ್ರಾಮಾಣಿಕವಾಗಿ ಭಿನ್ನಾಭಿಪ್ರಾಯ ಹೊಂದಿರುವವರು ರಾಜಕೀಯ ಪರಿಧಿಯೊಳಗೆ ಉಳಿಯುತ್ತಾರೆ. ಅಪ್ರಾಮಾಣಿಕವಾಗಿ ಭಿನ್ನಾಭಿಪ್ರಾಯ ಮೂಡಿಸುವವರನ್ನು ಇತಿಹಾಸವೇ ಶಿಕ್ಷಿಸುತ್ತದೆ. ಬಹುಶಃ ಅಲ್ಲಾಹುವೇ ಶಿಕ್ಷಿಸುತ್ತಾನೆ’ ಎಂದು ಹೇಳಿದ್ದಾರೆ.
‘ನಾವು ಯಾವಾಗಲೂ ಭಿನ್ನಾಭಿಪ್ರಾಯದ ಬಲದ ಮೇಲೆಯೇ ಬದುಕಿದ್ದೇವೆ ಮತ್ತು ಭಿನ್ನಾಭಿಪ್ರಾಯವೇ ಪ್ರಜಾಪ್ರಭುತ್ವದ ಆಧಾರ’ ಎಂದಿದ್ದಾರೆ.
ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಕಾಲದಲ್ಲಿ ಕಾಂಗ್ರೆಸ್‌ನಲ್ಲಿ ಭಿನ್ನಮತೀಯರು ಧ್ವನಿ ಎತ್ತಿದ್ದ ಹಲವಾರು ನಿದರ್ಶನಗಳನ್ನು ಅಯ್ಯರ್ ಅವರು ಉಲ್ಲೇಖಿಸಿದ್ದಾರೆ.
ತಿರುವನಂತಪುರ ಸಂಸದ ಶಶಿ ತರೂರ್ ಅವರನ್ನು ‘ತತ್ವಹೀನ ಜೀವಿ’ ಎಂದು ಕರೆದಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ‘ರೌಡಿ’ ಎಂದು ಜರಿದಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಪವನ್ ಖೇರಾ ಅವರನ್ನು ‘ಗಿಡ್ಡ ಕುದುರೆ’ ಎಂದು ಲೇವಡಿ ಮಾಡಿದ್ದಾರೆ. ರಮೇಶ್ ಚೆನ್ನಿತ್ತಲ ಅವರ ಕುರಿತೂ ವ್ಯಂಗ್ಯವಾಡಿದ್ದಾರೆ.
‘ಪಿಣರಾಯಿ ವಿಜಯನ್ ಅವರು ಮತ್ತೊಮ್ಮೆ ಕೇರಳ ಮುಖ್ಯಮಂತ್ರಿಯಾಗುವುದು ಖಚಿತ’ ಎಂದು ಅಯ್ಯರ್ ಅವರು ಭಾನುವಾರ ಹೇಳಿದ್ದರು. ಈ ಹೇಳಿಕೆಯಿಂದ ಕಾಂಗ್ರೆಸ್ ಅಂತರ ಕಾಯ್ದುಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.