ADVERTISEMENT

ಮಣಿಪುರ: ಬಿಜೆಪಿ ಪ್ರಣಾಳಿಕೆ ಬಿಡುಗಡೆ, ಉಚಿತ ಸಿಲಿಂಡರ್ –ಲ್ಯಾಪ್‌ಟಾಪ್ ಭರವಸೆ

ಐಎಎನ್ಎಸ್
Published 17 ಫೆಬ್ರುವರಿ 2022, 14:50 IST
Last Updated 17 ಫೆಬ್ರುವರಿ 2022, 14:50 IST
ಜೆ.ಪಿ. ನಡ್ಡಾ
ಜೆ.ಪಿ. ನಡ್ಡಾ   

ಇಂಫಾಲ: ಮಣಿಪುರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮಹಿಳೆಯರು ಮತ್ತು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ‘ಚುನಾವಣಾ ಪ್ರಣಾಳಿಕೆ ಕೇವಲ ಕಾಗದದ ತುಂಡು ಅಲ್ಲ.ಜನರಿಗೆ ಮತ್ತು ರಾಜ್ಯದ ಸರ್ವತೋಮುಖ ಅಭಿವೃದ್ಧಿಯೊಂದಿಗೆ ಮಣಿಪುರವನ್ನು ಮಾದರಿ ರಾಜ್ಯವಾಗಿಸಲು ಬಿಜೆಪಿ ಬದ್ಧವಾಗಿದೆ’ ಎಂದು ಭರವಸೆ ನೀಡಿದ್ದಾರೆ.

ಬಡ ಮಹಿಳೆಯರಿಗೆ ಎರಡು ಉಚಿತ ಅಡುಗೆ ಅನಿಲ ಸಿಲಿಂಡರ್, ಎಲ್ಲರಿಗೂ ಉಚಿತ ಸ್ಕೂಟಿ (ದ್ವಿಚಕ್ರ ವಾಹನ) ಭರವಸೆ ನೀಡಿದ್ದಾರೆ. ಪ್ರತಿಭಾವಂತ ಕಾಲೇಜು ವಿದ್ಯಾರ್ಥಿನಿಯರು ಅಥವಾ ಬಡ ಹೆಣ್ಣುಮಕ್ಕಳಿಗೆ ₹25,000 ಪ್ರೋತ್ಸಾಹಧನ ಮತ್ತು 12ನೇ ತರಗತಿಯಲ್ಲಿ ಉತ್ತೀರ್ಣರಾದ ಎಲ್ಲಾ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ಗಳು ನೀಡುವುದಾಗಿ ಘೋಷಿಸಲಾಗಿದೆ.

ADVERTISEMENT

ರಾಜ್ಯದ ಎಲ್ಲಾ ಹಿರಿಯ ನಾಗರಿಕರಿಗೆ ಮಾಸಿಕ ಪಿಂಚಣಿಯನ್ನು ₹200ರಿಂದ ₹1 ಸಾವಿರಕ್ಕೆ ಏರಿಕೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ನೀಡಲಾಗುವ ಹಣವನ್ನು ₹6 ರಿಂದ ₹8 ಸಾವಿರಕ್ಕೆ ಹೆಚ್ಚಳ ಮಾಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ.

ಪ್ರಾದೇಶಿಕ ಸಮಗ್ರತೆ ಮತ್ತು ರಾಜ್ಯದ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಲು ಬಿಜೆಪಿ ಬದ್ಧವಾಗಿದೆ ಎಂದ ನಡ್ಡಾ, ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರ ಅಧಿಕಾರವಧಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಜಾರಿಗೊಳಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ವೇಳೆ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷೆ ಎ. ಶಾರದಾ ದೇವಿ, ಮಣಿಪುರದ ಬಿಜೆಪಿ ಉಸ್ತುವಾರಿ ಸಂಬಿತ್‌ ಪಾತ್ರ ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರಗಳಲ್ಲಿ ಯುವಕರ ಕೌಶಲ್ಯವನ್ನು ಹೆಚ್ಚಿಸಲು ಕೌಶಲ್ಯ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಭರವಸೆಯನ್ನು ಬಿಜೆಪಿ ನೀಡಿದೆ.

ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ಮತ್ತು ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಲಾಗುವುದೆಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.