ADVERTISEMENT

ನಕಲಿ ಎನ್‌ಕೌಂಟರ್‌ ಪ್ರಕರಣ: ನ್ಯಾಯಪೀಠ ಬದಲಾವಣೆ ಕೋರಿದ್ದ ಅರ್ಜಿ ತಿರಸ್ಕೃತ

ಪಿಟಿಐ
Published 12 ನವೆಂಬರ್ 2018, 18:31 IST
Last Updated 12 ನವೆಂಬರ್ 2018, 18:31 IST

ನವದೆಹಲಿ: ಮಣಿಪುರ ನಕಲಿ ಎನ್‌ಕೌಂಟರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ನ್ಯಾಯಪೀಠದ ನ್ಯಾಯಮೂರ್ತಿಗಳನ್ನು ಮತ್ತು ಎಸ್‌ಐಟಿ ತಂಡವನ್ನು ಬದಲಿಸಬೇಕು ಎಂದು ಮಣಿಪುರ ಪೊಲೀಸ್‌ ಸಿಬ್ಬಂದಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ವಜಾ ಮಾಡಿದೆ.

ನ್ಯಾಯಮೂರ್ತಿಗಳಾದ ಮದನ್‌ ಬಿ. ಲೋಕೂರ ಮತ್ತು ಯು.ಯು. ಲಲಿತ್‌ ಅವರನ್ನೊಳಗೊಂಡ ಪೀಠ, ‘ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐನ ವಿಶೇಷ ತನಿಖಾ ತಂಡ (ಎಸ್‌ಐಟಿ) ಹಾಗೂ ನ್ಯಾಯಮೂರ್ತಿಗಳನ್ನು ಬದಲಿಸಲು ಯಾವುದೇ ಬಲವಾದ ಕಾರಣಗಳಿಲ್ಲ’ ಎಂದು ಹೇಳಿ ಅರ್ಜಿ ತಿರಸ್ಕರಿಸಿತು.

‘ಎಸ್‌ಐಟಿ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಹೆಸರಿರುವ ಪೊಲೀಸರನ್ನು ನ್ಯಾಯಪೀಠವು ‘‘ಕೊಲೆಗಾರರು’’ ಎಂದು ಕರೆದಿದೆ. ಇಂತಹ ಎಸ್‌ಐಟಿ ಮತ್ತು ನ್ಯಾಯಪೀಠದಿಂದ ನಿಷ್ಪಕ್ಷಪಾತ ತನಿಖೆ ನಡೆಯುವುದು ಅನುಮಾನ’ ಎಂದು ಅರ್ಜಿದಾರರ ಪರ ವಕೀಲ ಮುಕುಲ್‌ ರೋಹಟಗಿ ಹೇಳಿದರು.

ADVERTISEMENT

ನಕಲಿ ಎನ್‌ಕೌಂಟರ್‌ಗೆ ಸಂಬಂಧಿಸಿದಂತೆ ಮಣಿಪುರದಲ್ಲಿ 1,528 ಪ್ರಕರಣಗಳು ಕಳೆದ ಜುಲೈನಲ್ಲಿ ದಾಖಲಾಗಿದ್ದವು. ಈ ಸಂಬಂಧ ತನಿಖೆಗೆ ಒತ್ತಾಯಿಸಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.