ಸಾಂದರ್ಭಿಕ ಚಿತ್ರ
ಗುವಾಹಟಿ: ಮಣಿಪುರದಲ್ಲಿ 2023ರಲ್ಲಿ ಜನಾಂಗೀಯ ಗಲಭೆ ಉಂಟಾದಾಗ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 6 ಆರೋಪಿಗಳ ವಿರುದ್ಧ ಗುವಾಹಟಿಯ ವಿಶೇಷ ಸಿಬಿಐ ನ್ಯಾಯಾಲಯ 15 ಆರೋಪಗಳನ್ನು ಹೊರಿಸಿದೆ.
ಸಾಮೂಹಿಕ ಅತ್ಯಾಚಾರ, ಕೊಲೆ, ಹಿಂಸಾಚಾರ ಸೇರಿ ಆರೋಪಿಗಳ ವಿರುದ್ಧ ವಿವಿಧ ಆರೋಪಗಳನ್ನು ಹೊರಿಸಲಾಗಿದೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಜ.16ರಂದು ನಡೆಸಲಾಗುವುದು ಎಂದು ವಿಶೇಷ ಸಿಬಿಐ ನ್ಯಾಯಾಧೀಶ ಛತ್ರ ಭೂಕನ್ ಗೊಗೋಯಿ ಹೇಳಿದರು.
ಆರು ಆರೋಪಿಗಳಲ್ಲಿ ನಾಲ್ವರು ಮಣಿಪುರ ಜೈಲಿನಲ್ಲಿದ್ದು, ಅವರನ್ನು ಗುರುವಾರ ಕೋರ್ಟ್‌ಗೆ ಹಾಜರುಪಡಿಸಲಾಯಿತು. ಇನ್ನುಳಿದ ಇಬ್ಬರು ಆರೋಪಿಗಳು ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದಾರೆ.
2023ರ ಮೇ 4ರಂದು ಘಟನೆ ನಡೆದಿತ್ತು. ಮೂವರು ಮಹಿಳೆಯರನ್ನು ಆರೋಪಿಗಳು ಬೆತ್ತಲೆಗೊಳಿಸಿ, ಇವರಲ್ಲಿ ಇಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಸಂತ್ರಸ್ತೆಯರಲ್ಲಿ ಒಬ್ಬರ ಕುಟುಂಬದ ಸದಸ್ಯರನ್ನು ಹತ್ಯೆ ಮಾಡಲಾಗಿತ್ತು. ಮಹಿಳೆಯರನ್ನು ಬೆತ್ತಲೆಗೊಳಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಂತರ ಘಟನೆ ಬೆಳಕಿಗೆ ಬಂದಿತ್ತು.
‘ಈ ಪ್ರಕರಣದಲ್ಲಿ ಎಲ್ಲ ಆರು ಆರೋಪಿಗಳ ವಿರುದ್ಧವೂ ಸಾಕ್ಷ್ಯಗಳಿವೆ’ ಎನ್ನುವುದು ಕೋರ್ಟ್ ಗಮನಕ್ಕೆ ಬಂದಿದೆ. ಇದರ ಆಧಾರದಲ್ಲಿ ಐಪಿಸಿ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದ ಮೇಲಿನ ದೌರ್ಜನ್ಯ ತಡೆಗಟ್ಟುವಿಕೆ ಕಾಯ್ದೆಯಡಿ ಆರೋಪಗಳನ್ನು ಹೊರಿಸಲಾಗಿದೆ’ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.