ADVERTISEMENT

ಮ್ಯಾನ್ಮಾರ್‌ ನಿರಾಶ್ರಿತರಿಗೆ ಆಶ್ರಯ ಕೊಡಬೇಡಿ:ಸುತ್ತೋಲೆ ಹಿಂಪಡೆದ ಮಣಿಪುರ ಸರ್ಕಾರ

ಪಿಟಿಐ
Published 30 ಮಾರ್ಚ್ 2021, 6:59 IST
Last Updated 30 ಮಾರ್ಚ್ 2021, 6:59 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಇಂಫಾಲ್: ಮ್ಯಾನ್ಮಾರ್‌ನಲ್ಲಿ ಮಿಲಿಟರಿ ದಂಗೆಯ ನಂತರ ಅಲ್ಲಿಂದ ಭಾರತಕ್ಕೆ ಬರುತ್ತಿರುವ ನಿರಾಶ್ರಿತರಿಗೆ ಆಹಾರ ಮತ್ತು ಆಶ್ರಯ ನೀಡಲು ಯಾವುದೇ ಶಿಬಿರಗಳನ್ನು ತೆರೆಯಬಾರದು ಎಂದು ಗಡಿ ಭಾಗದ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದ ಮಣಿಪುರ ಸರ್ಕಾರವು, ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾದ ಕಾರಣ ಮೂರೇ ದಿನಗಳಲ್ಲಿ ಆ ಸುತ್ತೋಲೆಯನ್ನು ಹಿಂದಕ್ಕೆ ಪಡೆದಿದೆ.

ಚಂದೇಲ್‌, ತೆಂಗೌಪಾಲ್‌, ಕಮ್ಜಾಂಗ್‌, ಉಖ್ರುಲ್‌ ಮತ್ತು ಚುರಾಚಂದಪುರದ ಜಿಲ್ಲಾಧಿಕಾರಿಗಳಿಗೆ ಮಾರ್ಚ್‌ 26ರಂದು ವಿಶೇಷ ಕಾರ್ಯದರ್ಶಿ (ಗೃಹ) ಈ ಸುತ್ತೋಲೆ ಹೊರಡಿಸಿದ್ದರು. ಅಲ್ಲದೆ ಅವರು ಆಧಾರ್‌ ದಾಖಲಾತಿಯನ್ನೂ ನಿಲ್ಲಿಸುವಂತೆ ಸೂಚಿಸಿದ್ದರು.

‘ನೆರೆಯ ರಾಷ್ಟ್ರ ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಘಟನೆಗಳ ಪರಿಣಾಮವಾಗಿ, ಅಲ್ಲಿನ ಪ್ರಜೆಗಳು ಮಣಿಪುರ ಸೇರಿದಂತೆ ಗಡಿ ರಾಜ್ಯಗಳ ಮೂಲಕ ಭಾರತ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ. ಹಾಗಾಗಿ ಜಿಲ್ಲಾಡಳಿತವು ಅವರಿಗೆ ಆಹಾರ ಮತ್ತು ಆಶ್ರಯವನ್ನು ಒದಗಿಸಲು ಯಾವುದೇ ಶಿಬಿರಗಳನ್ನು ತೆರೆಯಬಾರದು. ಅಲ್ಲದೆ, ಯಾವುದೇ ಶಿಬಿರಗಳನ್ನು ತೆರೆಯಲು ನಾಗರಿಕ ಸಮಾಜ ಸಂಸ್ಥೆಗಳಿಗೂ ಅವಕಾಶ ನೀಡಬಾರದು’ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿತ್ತು.

ADVERTISEMENT

ಈ ಸುತ್ತೋಲೆಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಕಾರಣ, ತನ್ನ ನಿಲುವು ಬದಲಿಸಿರುವ ಮಣಿಪುರ ಸರ್ಕಾರ ಸುತ್ತೋಲೆಯನ್ನು ಹಿಂದಕ್ಕೆ ಪಡೆದಿದೆ.

ಸುತ್ತೋಲೆಯನ್ನು ತಪ್ಪಾಗಿ ಅರ್ಥೈಸಿ, ವಿಭಿನ್ನವಾಗಿ ವ್ಯಾಖ್ಯಾನಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿರುವ ಸರ್ಕಾರ, ಈ ತಪ್ಪುಗ್ರಹಿಕೆಯನ್ನು ತಪ್ಪಿಸಲು ಸುತ್ತೋಲೆ ಹಿಂದಕ್ಕೆ ಪಡೆಯಲು ನಿರ್ಧರಿಸಿದ್ದಾಗಿ ತಿಳಿಸಿದೆ.

ಮ್ಯಾನ್ಮಾರ್‌ನಿಂದ ಬರುತ್ತಿರುವ ಗಾಯಗೊಂಡ ನಿರಾಶ್ರಿತರಿಗೆ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ ಇತ್ತೀಚೆಗೆ ಎಲ್ಲ ಮಾನವೀಯ ಕ್ರಮಗಳನ್ನು ತೆಗೆದುಕೊಂಡಿದೆ. ಅಲ್ಲದೆ ಅವರನ್ನು ಚಿಕಿತ್ಸೆ ಸಲುವಾಗಿ ಇಂಫಾಲ್‌ಗೆ ಕರೆದೊಯ್ಯಲೂ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ರಾಜ್ಯ ಸರ್ಕಾರ ಇಷ್ಟೆಲ್ಲ ನೆರವು ನೀಡುತ್ತಿದ್ದರು, ಸರ್ಕಾರದ ಕ್ರಮಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಸರ್ಕಾರ ಹೇಳಿದೆ.

ಮ್ಯಾನ್ಮಾರ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಮಾನವ ದುರಂತ ಸಂಭವಿಸುತ್ತಿದ್ದು, ಅಲ್ಲಿನ ಮುಗ್ದ ನಾಗರಿಕರನ್ನು ಮಿಲಿಟರಿ ಕೊಲ್ಲುತ್ತಿದೆ. ಹಾಗಾಗಿ ಅಲ್ಲಿನ ನಾಗರಿಕರನ್ನು ರಕ್ಷಿಸಬೇಕು ಮತ್ತು ನಿರಾಶ್ರಿತರಿಗೆ ಆಶ್ರಯ ನೀಡಬೇಕು ಎಂದು ಒತ್ತಾಯಿಸಿ ಮಿಜೋರಾಂ ಮುಖ್ಯಮಂತ್ರಿ ಜೊರಾಮ್‌ತಂಗಾ ಅವರು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿದ್ದರು.

ದಂಗೆಯ ನಂತರ 1,000ಕ್ಕೂ ಹೆಚ್ಚು ಮ್ಯಾನ್ಮಾರ್‌ ಪ್ರಜೆಗಳು ಮಿಜೋರಾಂನಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.