ADVERTISEMENT

ವಿದ್ಯಾರ್ಥಿಗಳ ಹತ್ಯೆ: ಇಂಫಾಲ ಉದ್ವಿಗ್ನ, ಇಂದು ಸಿಬಿಐ ತಂಡ ಭೇಟಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2023, 23:11 IST
Last Updated 26 ಸೆಪ್ಟೆಂಬರ್ 2023, 23:11 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಗುವಾಹಟಿ: ಜುಲೈ 6ರಿಂದ ನಾಪತ್ತೆಯಾಗಿದ್ದ, ಮೈತೇಯಿ ಸಮುದಾಯಕ್ಕೆ ಸೇರಿದ ಇಬ್ಬರು ವಿದ್ಯಾರ್ಥಿಗಳ ಮೃತದೇಹದ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾದ ನಂತರದಲ್ಲಿ ಮಣಿಪುರದ ಇಂಫಾಲದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.

ಹತ್ಯೆಯ ಸುದ್ದಿ ಕೇಳಿದ ಶಾಲಾ ವಿದ್ಯಾರ್ಥಿಗಳು ಇಂಫಾಲದ ರಸ್ತೆಗೆ ಇಳಿದು ಆಕ್ರೋಶ ವ್ಯಕ್ತಪಡಿಸಿದರು. ಅವರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಶೆಲ್ ಸಿಡಿಸಬೇಕಾಯಿತು. ಕಾನೂನು ಮತ್ತು ಸುವ್ಯವಸ್ಥೆಯು ಇನ್ನಷ್ಟು ಹದಗೆಡಬಹುದು ಎಂಬ ಭೀತಿಯಿಂದ ರಾಜ್ಯದ ಶಿಕ್ಷಣ ಇಲಾಖೆಯು ಸರ್ಕಾರಿ ಶಾಲೆಗಳನ್ನು ಮುಚ್ಚಿದೆ. ದುಷ್ಕರ್ಮಿಗಳ ವಿರುದ್ಧ ತ್ವರಿತವಾಗಿ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಭರವಸೆ ನೀಡಿದೆ.

ADVERTISEMENT

ಹತ್ಯೆಯಾಗಿರುವ ವಿದ್ಯಾರ್ಥಿಗಳ ಎರಡು ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳಲಾಗಿದೆ. ಈ ಇಬ್ಬರು ವಿದ್ಯಾರ್ಥಿಗಳನ್ನು ಫಿಜಾಮ್ ಹೇಮಜಿತ್ (20) ಮತ್ತು ಹಿಜಾಮ್ ಲಿಂಥೋಯ್ನ್‌ಗಂಬಿ (17) ಎಂದು ಗುರುತಿಸಲಾಗಿದೆ. ಒಂದು ಚಿತ್ರದಲ್ಲಿ ಈ ಇಬ್ಬರು ವಿದ್ಯಾರ್ಥಿಗಳು ಒಟ್ಟಾಗಿ ಕುಳಿತುಕೊಂಡಿದ್ದಾರೆ, ಅವರ ಹಿಂದೆ ಶಸ್ತ್ರಸಜ್ಜಿತ ಪುರುಷರು ಇದ್ದಾರೆ. ಎರಡನೆಯ ಚಿತ್ರದಲ್ಲಿ ಈ ಇಬ್ಬರು ವಿದ್ಯಾರ್ಥಿಗಳ ಶವ ಕಾಡಿನಲ್ಲಿ ಬಿದ್ದಿದೆ. ಎರಡನೆಯ ಚಿತ್ರದಲ್ಲಿ, ವಿದ್ಯಾರ್ಥಿ ಹೇಮಜಿತ್‌ನ ರುಂಡ ಇಲ್ಲ. ಇವರಿಬ್ಬರೂ ಇಂಫಾಲದ ನಿವಾಸಿಗಳಾಗಿದ್ದರು.

ಅಪಹರಣ ಹಾಗೂ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ ಎಂದು ಮುಖ್ಯಮಂತ್ರಿ ಎನ್‌. ಬಿರೇನ್ ಸಿಂಗ್ ಅವರ ಸಚಿವಾಲಯ ಸೋಮವಾರ ರಾತ್ರಿ ನೀಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

‘ಈ ಇಬ್ಬರು ವಿದ್ಯಾರ್ಥಿಗಳ ನಾಪತ್ತೆ ಕುರಿತು ಹಾಗೂ ಅವರ ಹತ್ಯೆ ಮಾಡಿದವರ ಕುರಿತು ರಾಜ್ಯ ಪೊಲೀಸರು ಕೇಂದ್ರೀಯ ಭದ್ರತಾ ಸಂಸ್ಥೆಗಳ ಜೊತೆಯಾಗಿ ತನಿಖೆ ನಡೆಸುತ್ತಿದ್ದಾರೆ. ಹತ್ಯೆ ಮಾಡಿದವರನ್ನು ಬಂಧಿಸಲು ಭದ್ರತಾ ಪಡೆಗಳು ಕೂಡ ಶೋಧ ಕಾರ್ಯದಲ್ಲಿ ತೊಡಗಿವೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ವಿದ್ಯಾರ್ಥಿಗಳ ಅಪಹರಣ ಹಾಗೂ ಹತ್ಯೆಯಲ್ಲಿ ಭಾಗಿಯಾದ ಎಲ್ಲರ ವಿರುದ್ಧ ತ್ವರಿತವಾಗಿ, ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಸರ್ಕಾರವು ಭರವಸೆ ನೀಡಿದೆ. ಮೇ ತಿಂಗಳ ಆರಂಭದಿಂದಲೂ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ನಡೆಯುತ್ತಿದೆ. ಜನಾಂಗೀಯ ಹಿಂಸಾಚಾರ ಆರಂಭವಾದ ನಂತರ ಅಲ್ಲಿ 175ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. 

ಇಂಫಾಲ್‌ನಲ್ಲಿ ನಡೆದ ಪ್ರತಿಭಟನೆಯ ನಂತರ ಮಣಿಪುರದಲ್ಲಿ ಐದು ದಿನಗಳ ಕಾಲ ಇಂಟರ್‌ನೆಟ್‌ ಸೇವೆ
ಸ್ಥಗಿತಗೊಳಿಸಲಾಗಿದೆ.

ಇಂದು ಸಿಬಿಐ ತಂಡ ಭೇಟಿ

ಗುವಾಹಟಿ: ವಿದ್ಯಾರ್ಥಿಗಳ ಹತ್ಯೆ ಪ್ರಕರಣದ ತನಿಖೆ ನಡೆಸಲು ಸಿಬಿಐ ಅಧಿಕಾರಿಗಳ ತಂಡ ಬುಧವಾರ ಮಣಿಪುರಕ್ಕೆ ಭೇಟಿ ನೀಡಲಿದೆ ಎಂದು ಮುಖ್ಯಮಂತ್ರಿ ಎನ್‌. ಬಿರೇನ್‌ ಸಿಂಗ್‌ ತಿಳಿಸಿದ್ದಾರೆ.

‘ಕೇಂದ್ರ ಹಾಗೂ ರಾಜ್ಯ ಸರ್ಕಾರವು ಕಣಿವೆ ರಾಜ್ಯದ ಜನರ ಹಿತಕಾಯಲು ಬದ್ಧವಾಗಿವೆ. ಹೇಯಕೃತ್ಯ ಎಸಗಿರುವ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು’ ಎಂದು ಅವರು ‘ಎಕ್ಸ್‌’ನಲ್ಲಿ ತಿಳಿಸಿದ್ದಾರೆ.

ಸಿಬಿಐನ ವಿಶೇಷ ನಿರ್ದೇಶಕ ಅಜಯ್ ಭಟ್ನಾಗರ್ ನೇತೃತ್ವದ ತಂಡವು ಈ ಪ್ರಕರಣದ ತನಿಖೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.