ಇಂಫಾಲ್/ನವದೆಹಲಿ: ಮಣಿಪುರದಲ್ಲಿ 2023ರಲ್ಲಿ ಆರಂಭವಾದ ಹಿಂಸಾಚಾರಕ್ಕೆ ಸಂಬಂಧಿಸಿ ಮೈತೇಯಿ ಬಂಡುಕೋರ ಸಂಘಟನೆ ‘ಅರಂಬಾಯ್ ಟೆಂಗೋಲ್’ನ ನಾಯಕ ಕನನ್ ಸಿಂಗ್ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಮಣಿಪುರ ಮತ್ತೊಮ್ಮೆ ಉದ್ವಿಗ್ನಗೊಂಡಿದೆ.
‘ಅರಂಬಾಯ್ ಟೆಂಗೋಲ್’ ಸಂಘಟನೆಯ ಸದಸ್ಯರ ವಿರುದ್ಧ ಪೊಲೀಸರು ಮತ್ತು ಸೇನೆಯ ಸಂಗ್ರಹಾರಗಳಿಂದ ಶಸ್ತ್ರಾಸ್ತ್ರ ಲೂಟಿ, ಪೊಲೀಸ್ ಅಧಿಕಾರಿಗಳ ಅಪಹರಣ, ಕುಕಿ ಬುಡಕಟ್ಟು ಸಮುದಾಯಗಳ ಮೇಲೆ ಹಿಂಸಾಚಾರ ಸೇರಿದಂತೆ ಹಲವು ಅಪರಾಧ ಪ್ರಕರಣಗಳಿವೆ.
ಇಂಫಾಲ್‌ನ ವಿಮಾನ ನಿಲ್ದಾಣದಿಂದ ಕನನ್ ಸಿಂಗ್ ಅವರನ್ನು ಸಿಬಿಐ ಭಾನುವಾರ ಬಂಧಿಸಿದೆ. ಕನನ್ ಅವರಿಗೆ ಸಹಕಾರ ನೀಡಿದ ಸಂಬಂಧ ಮಣಿಪುರ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಆದರೆ, ಕನನ್ ಅವರನ್ನು ಯಾವ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂಬ ಮಾಹಿತಿಯನ್ನು ಸಿಬಿಐ ನೀಡಿಲ್ಲ. ಬಂಧಿತ ಇತರ ನಾಲ್ವರು ಯಾರು ಎಂಬ ಬಗ್ಗೆಯೂ ಪೊಲೀಸರು ಮಾಹಿತಿ ನೀಡಿಲ್ಲ.
ಕನನ್ ಸಿಂಗ್ ಅವರನ್ನು ತಕ್ಷಣವೇ ಅಸ್ಸಾಂನ ಗುವಹಾಟಿಗೆ ಕರೆದೊಯ್ಯಲಾಗಿದೆ. ಅಲ್ಲಿ ಅವರನ್ನು ನ್ಯಾಯಾಲಯದ ಎದುರು ಹಾಜರುಪಡಿಸಲಾಗುವುದು ಎಂದು ಸಿಬಿಐ ತಿಳಿಸಿದೆ. ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯನ್ನು ಗುವಾಹಟಿಯಲ್ಲಿ ನಡೆಸಲಾಗುತ್ತಿದೆ. ಹಿಂಸಾಚಾರದ ಕುರಿತು ತನಿಖೆ ನಡೆಸುವಂತೆ ಸಿಬಿಐಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು.
ಕನನ್ ಸಿಂಗ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂಬ ವದಂತಿ ಮೈತೇಯಿ ಸಮುದಾಯದ ಪ್ರಾಬಲ್ಯ ಇರುವ ರಾಜ್ಯದ ಕಣಿವೆ ಪ್ರದೇಶಗಳಲ್ಲಿ ಶನಿವಾರ ರಾತ್ರಿಯಿಂದಲೇ ಹಬ್ಬಿಕೊಂಡಿತು. ಭಾನುವಾರವೂ ಉದ್ವಿಗ್ನ ಸ್ಥಿತಿ ಮುಂದುವರಿದಿದೆ.
ಈ ಎಲ್ಲ ಕಡೆಗಳಲ್ಲಿಯೂ ಹಿಂಸಾಚಾರ ನಡೆದಿದೆ. ಮೈತೇಯಿ ಸಮುದಾಯದ ಜನರು, ಬಂಡುಕೋರ ಸಂಘಟನೆಯ ಸದಸ್ಯರು ಭದ್ರತಾ ಪಡೆಗಳ ಜೊತೆಯಲ್ಲಿ ಸಂಘರ್ಷ ನಡೆಸಿದ ವರದಿಗಳಾಗಿವೆ. ಬಸ್‌ವೊಂದಕ್ಕೆ ಬೆಂಕಿ ಹಚ್ಚಲಾಗಿದೆ. ಉದ್ವಿಗ್ನತೆ ಅಧಿಕಗೊಂಡಿರುವ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ.
ರಾಜಭವನಕ್ಕೆ 200 ಮೀಟರ್ ದೂರದಲ್ಲಿ ಜಮಾಯಿಸಿದ್ದ ಜನರನ್ನು ಚದುರಿಸಲು ಭದ್ರತಾ ಪಡೆಗಳು ಹಲವು ಸುತ್ತು ಅಶ್ರುವಾಯು ಸಿಡಿಸಿದರು. ರಾಜಭವನದ ಸುತ್ತ ಕೇಂದ್ರ ಮೀಸಲು ಪಡೆ ನಿಯೋಜನೆ ಸೇರಿದಂತೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ರಸ್ತೆಗಳಲ್ಲಿ ಟೈರ್‌ಗಳನ್ನು ಸುಡಲಾಗಿದೆ. ಭದ್ರತಾ ಪಡೆಗಳು ಸಂಚರಿಸದಂತೆ ರಸ್ತೆಯ ಮೇಲೆ ಮಣ್ಣಿನ ರಾಶಿಗಳನ್ನು ಸುರಿಯಲಾಗಿದೆ.
l ಪಶ್ಚಿಮ ಇಂಫಾಲ್
l ಪೂರ್ವ ಇಂಫಾಲ್
l ತೌಬಾಲ್ವಿ
l ವಿಷ್ಣುಪುರ
l ಕಾಕ್‌ಚಿಂಗ್
ಶಾಂತಿಯನ್ನು ಭಂಗಗೊಳಿಸುವ, ಜನರ ನೆಮ್ಮದಿಯನ್ನು ಹಾಳುಗೆಡಹುವ, ಹಿಂಸಾಚಾರ ನಡೆದಿರುವ ಘಟನೆಗಳು ಪಶ್ಚಿಮ ಇಂಫಾಲ್ ಜಿಲ್ಲೆಯಲ್ಲಿ ನಡೆದಿದೆ. ಜನರ ಜೀವಗಳಿಗೆ, ಆಸ್ತಿಗಳಿಗೆ ಅಪಾಯ ಎದುರಾಗಿದೆ. ಈ ಜಿಲ್ಲೆಯಲ್ಲಿ ಸಮಾಜಘಾತುಕ ಚಟುವಟಿಕೆಗಳು ನಡೆಯುತ್ತಿವೆ–ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿಕೆ
ನಿಷೇಧಾಜ್ಞೆ ಜಾರಿ, ಇಂಟರ್‌ನೆಟ್ ಸೇವೆ ಸ್ಥಗಿತ
l ಪಶ್ಚಿಮ ಇಂಫಾಲ್‌ನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕೋಲು, ಕಲ್ಲು, ಪಂಜು ಸೇರಿದಂತೆ ಚೂಪಾದ ವಸ್ತುಗಳನ್ನು ಕೈಯಲ್ಲಿ ಹಿಡಿದು ಓಡಾಡಬಾರದು ಎಂದು ಆದೇಶಿಸಲಾಗಿದೆ. ಜೂನ್ 10ರಿಂದ ಅನ್ವಯವಾಗುವಂತೆ ಪೂರ್ವ ಇಂಫಾಲ್‌ನ ಜನರು ಮನೆಯಿಂದ ಹೊರಬರದಂತೆ ಆದೇಶ. ವಿಷ್ಣುಪುರ ಜಿಲ್ಲೆಯಲ್ಲಿ ಕರ್ಫ್ಯೂ ಜಾರಿ
l ಶನಿವಾರ ರಾತ್ರಿ 11.45ರಿಂದ ಮುಂದಿನ ಐದು ದಿನಗಳವರೆಗೆ ಐದು ಜಿಲ್ಲೆಗಳಲ್ಲಿ ಇಂಟರ್‌ನೆಟ್ ಸೇವೆ ಸ್ಥಗಿತ
l ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಿಯೋಗವು ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರನ್ನು ಭೇಟಿಯಾಯಿತು. ರಾಜ್ಯದಲ್ಲಿ ನಿರ್ಮಾಣವಾಗಿರುವ ಉದ್ವಿಗ್ನ ಸ್ಥಿತಿಯನ್ನು ತಿಳಿಗೊಳಿಸಲು ರಾಜ್ಯಪಾಲರು ಮಧ್ಯೆ ಪ್ರವೇಶಿಸಬೇಕು ಎಂದು ಶಾಸಕರು ಮನವಿ ಮಾಡಿದ್ದಾರೆ. ಭದ್ರತೆ ಕುರಿತು ರಾಜ್ಯಪಾಲರು ಭಾನುವಾರ ಪರಿಶೀಲನೆ ನಡೆಸಿದರು
l ಕಳೆದ ವರ್ಷ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿದ ಆರೋಪದಲ್ಲಿ ಕುಕಿ ಬುಡಕಟ್ಟು ಸಮುದಾಯದ ಮೂವರನ್ನು ಬಂಧಿಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಭಾನುವಾರ ಹೇಳಿದೆ.
ಮಣಿಪುರದ ಜನರ ನೋವು, ಸಂಕಟ, ಅಸಹಾಯಕ ಸ್ಥಿತಿಯು ಮುಗಿಯುವಂತೆ ಕಾಣುತ್ತಿಲ್ಲ. 2023ರ ಜೂನ್ 4ರಂದು ಕೇಂದ್ರ ಸರ್ಕಾರವು ವಿಚಾರಣಾ ಆಯೋಗವೊಂದನ್ನು ರಚಿಸಿತು. ಆಯೋಗವು ತನ್ನ ವರದಿಯನ್ನು ನೀಡಲು ನೀಡಿದ್ದ ಗಡುವನ್ನು ಕೇಂದ್ರ ಸರ್ಕಾರವು ಪದೇ ಪದೇ ಮುಂದೂಡಿತು. 2025ರ ನವೆಂಬರ್ 20ಕ್ಕೆ ಮುಂದಿನ ಗಡುವನ್ನು ನಿಗದಿ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈವರೆಗೆ ರಾಜ್ಯಕ್ಕೆ ಭೇಟಿ ನೀಡಿಲ್ಲ. ರಾಷ್ಟ್ರಪತಿ ಆಳ್ವಿಕೆ ಹೇರಿಕೆಯಿಂದ ಕೂಡ ಯಾವುದೇ ಪ್ರಯೋಜನ ವಾಗಿಲ್ಲ. ಮಣಿಪುರದ ಜನರ ಕುರಿತ ಪ್ರಧಾನಿ ಅವರ ಸಂವೇದನಾರಹಿತ ನಡವಳಿಕೆಯು ಆಘಾತಕಾರಿ ಮತ್ತು ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ
ಜೈರಾಮ್ ರಮೇಶ್, ಎಐಸಿಸಿ ಪ್ರಧಾನ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.