ಚುರಾಚಾಂದ್‌ಪುರ: ಖಾಲಿ ಶವಪೆಟ್ಟಿಗೆ ಹೊತ್ತು ಪ್ರತಿಭಟನೆ ಚುರಾಚಂದಪುರ(ಪಿಟಿಐ): ಮಣಿಪುರದ ಜಿರೀಬಾಮ್‌ನಲ್ಲಿ ಭದ್ರತಾ ಪಡೆಗಳ ಗುಂಡೇಟಿಗೆ ಬಲಿಯಾದವರಿಗೆ ನ್ಯಾಯ ನೀಡುವಂತೆ ಆಗ್ರಹಿಸಿ ಚುರಾಚಂದಪುರದಲ್ಲಿ ನೂರಾರು ಜನರು ಖಾಲಿ ಶವಪೆಟ್ಟಿಗೆ ಹೊತ್ತು ಮಂಗಳವಾರ ಮೆರವಣಿಗೆ ನಡೆಸಿದರು. ‘ಜಾಯಿಂಟ್ ಫಿಲಾಂತ್ರೋಪಿಕ್ ಆರ್ಗನೈಜೇಷನ್’ (ಜೆಪಿಒ) ರ‍್ಯಾಲಿಯನ್ನು ಆಯೋಜಿಸಿತ್ತು.
ನೂರಾರು ಜನರು ಫಲಕಗಳನ್ನು ಹಿಡಿದು ನ್ಯಾಯಕ್ಕಾಗಿ ಆಗ್ರಹಿಸಿದರು. ನಂತರ ರಾಜ್ಯದಲ್ಲಿ ನಡೆಯುತ್ತಿರುವ ಸಂಘರ್ಷದಲ್ಲಿ ಮೃತಪಟ್ಟ ಕುಕಿ ಸಮುದಾಯದ ಜನರಿಗಾಗಿ ನಿರ್ಮಾಣ ಮಾಡಿರುವ ಸ್ಮಾರಕ ‘ವಾಲ್ ಆಫ್ ರಿಮೆಂಬರೆನ್ಸ್’ ಬಳಿ ಮೆರವಣಿಗೆಯನ್ನು ಸಮಾರೋಪಗೊಳಿಸಿದರು. ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬರೆದಿದ್ದ ಮನವಿಪತ್ರವನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರು.
ಜಿರೀಬಾಮ್‌ನಲ್ಲಿ ಹತ್ಯೆಗೀಡಾದವರು ಗ್ರಾಮದ ಸ್ವಯಂ ರಕ್ಷಕರು ಎಂದು ಕುಕಿ ಸಮುದಾಯ ಹೇಳಿಕೊಂಡಿದೆ. ಆದರೆ ಗುಂಡಿನ ದಾಳಿ ನಡೆದ ಸ್ಥಳದಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳು ಪತ್ತೆಯಾಗಿವೆ ಎಂದು ರಾಜ್ಯ ಪೊಲೀಸ್ ಹೇಳಿದೆ. ಕಳೆದ ವಾರ ಶಂಕಿತ ಉಗ್ರರು ಜಿಲ್ಲೆಯ ಬೊರೊಬೆಕ್ರಾ ಪೊಲೀಸ್ ಠಾಣೆ ಹಾಗೂ ಸಿಆರ್‌ಪಿಎಫ್ ಶಿಬಿರಕ್ಕೆ ಬೆಂಕಿ ಇಟ್ಟ ನಂತರ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಹತ್ತು ಮಂದಿ ಶಂಕಿತ ಉಗ್ರರು ಹತ್ಯೆಗೀಡಾಗಿದ್ದರು ಎಂದು ಮಣಿಪುರ ಪೊಲೀಸರು ತಿಳಿಸಿದ್ದಾರೆ.
ಕಣಿವೆ ರಾಜ್ಯದಲ್ಲಿ ಕಳೆದ ವರ್ಷ ಮೇ ತಿಂಗಳಿನಿಂದ ನಡೆಯುತ್ತಿರುವ ಸಂಘರ್ಷದಲ್ಲಿ 220ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಮತ್ತು ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.