
ಇಂಫಾಲ್: ಮೈತೇಯಿ ಸಮುದಾಯದ ವ್ಯಕ್ತಿಯನ್ನು ಶಂಕಿತ ಕುಕಿ ಉಗ್ರರು ಅಪಹರಿಸಿ ಹತ್ಯೆ ಮಾಡಿದ್ದು, ಮಣಿಪುರದಲ್ಲಿ ಹಿಂಸಾಚಾರ ಗುರುವಾರ ಭುಗಿಲೆದ್ದಿದೆ.
ಮಯಾಂಗ್ಲಂಬಮ್ ರಿಷಿಕಾಂತ ಸಿಂಗ್ ಹತ್ಯೆಯಾದ ವ್ಯಕ್ತಿ.
‘ಚುರಾಚಾಂದಪುರ ಜಿಲ್ಲೆಯ ಟುಯಿಬಾಂಗ್ ಪ್ರದೇಶದಲ್ಲಿನ ಮನೆಯಿಂದ ಬುಧವಾರ ಸಂಜೆ ರಿಷಿಕಾಂತ ದಂಪತಿಯನ್ನು ಅಪಹರಿಸಿದ ಬಂಡುಕೋರರು ನಾಟ್ಜಾಂಗ್ ಕಡೆ ಕರೆದೊಯ್ದರು. ಅಲ್ಲಿ ಸಿಂಗ್‌ಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ನಂತರ ಆತನ ಪತ್ನಿಯನ್ನು ಬಿಡುಗಡೆ ಮಾಡಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶಸ್ತ್ರಸಜ್ಜಿತರಾದ ಮೂವರು ಬಂಡುಕೋರರ ಬಳಿ ರಿಷಿಕಾಂತ ಕೈಮುಗಿದುಕೊಂಡು ಜೀವ ಭಿಕ್ಷೆ ಬೇಡುವ ವಿಡಿಯೊ ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡಿದ ಬೆನ್ನಿಗೆ ಮಣಿಪುರದಲ್ಲಿ ಉದ್ವಿಗ್ನತೆ ಹೆಚ್ಚಿದೆ.
ರಿಷಿ ಹತ್ಯೆ ಖಂಡಿಸಿ ಕಾಕ್ಚಿಂಗ್ ಜಿಲ್ಲೆಯಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ಕಾಕ್ಚಿಂಗ್, ಖುನೌ, ಲಮ್ಖೈ ಪ್ರದೇಶದಲ್ಲಿನ ಜನರು ರಸ್ತೆಗಳಲ್ಲಿ ಟೈರ್‌ಗಳನ್ನು ಸುಟ್ಟು ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು. ಇಂಫಾಲ್ ಪೂರ್ವ ಜಿಲ್ಲೆಯ ವಾಂಗ್ಖೆಯದ ಕೆಲ ಭಾಗದಲ್ಲೂ ಪ್ರತಿಭಟನೆ ನಡೆದವು.
‘ನೇಪಾಳದಿಂದ ಮರಳಿದ್ದ ರಿಷಿಕಾಂತನು ಚುರಾಚಾಂದಪುರ ಜಿಲ್ಲೆಯಲ್ಲಿರುವ ತನ್ನ ಪತ್ನಿ ಜೊತೆ ಉಳಿದಿದ್ದ. ದಂಪತಿಯನ್ನು ಅಪಹರಿಸಿದ್ದ ಮೂವರು ಉಗ್ರರು ಮಗನನ್ನು ಕೊಂದ ಬಳಿಕ ಚಲಿಸುವ ವಾಹನದಿಂದ ಸೊಸೆಯನ್ನು ಕೆಳಗೆ ತಳ್ಳಿದ್ದಾರೆ’ ಎಂದು ಮೃತರ ತಂದೆ ಮಯಾಂಗ್ಲಂಬಮ್ ಟೋಂಬಿ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅಪಹರಣಕಾರರು ಯುನೈಟೆಡ್ ಕುಕಿ ನ್ಯಾಷನಲ್ ಆರ್ಮಿಯ (ಯುಎನ್‌ಕೆಎ) ಸದಸ್ಯರಾಗಿದ್ದಾರೆ ಎಂದು ಶಂಕಿಸಲಾಗಿದ್ದು, ಆರೋಪಿಗಳ ಬಂಧನಕ್ಕೆ ಶೋಧ ನಡೆದಿದೆ.
ಕುಕಿ– ಜೋ ಬಂಡುಕೋರರ ಹಲವು ಸಂಘಟನೆಗಳ ಜೊತೆ ಕೇಂದ್ರ ಸರ್ಕಾರ, ಮಣಿಪುರ ಸರ್ಕಾರ ಒಪ್ಪಂದ ಮಾಡಿಕೊಂಡಿವೆ. ಆದರೆ, ಯುಎನ್‌ಕೆಎ ಸಂಘಟನೆಯು ಕಾರ್ಯಾಚರಣೆಗಳ ಅಮಾನತು (ಎಸ್‌ಒಒ) ಒಪ್ಪಂದಕ್ಕೆ ಸಹಿ ಹಾಕಿಲ್ಲ.
2023ರ ಮೇ ತಿಂಗಳಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ಕುಕಿಗಳು ಮತ್ತು ಮೈತೇಯಿಗಳು ಪರಸ್ಪರರ ಪ್ರದೇಶಗಳಿಗೆ ಭೇಟಿ ನೀಡುತ್ತಿಲ್ಲ.
ಹತ್ಯೆಯನ್ನು ಖಂಡಿಸಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷೆ ಅಧಿಕಾರಿಮಯೂಮ್ ಶಾರದಾ ದೇವಿ ಅವರು ಹಿಂಸಾಚಾರಕ್ಕೆ ಅವಕಾಶವಿಲ್ಲ ಎಂದು ‘ಎಕ್ಸ್’ನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.