
ಇಂಫಾಲ: ರಾಜ್ಯದಲ್ಲಿ ಜನಪ್ರಿಯ ಸರ್ಕಾರ ರಚಿಸುವುದು ಜನ ಹಾಗೂ ಪಕ್ಷದ ಶಾಸಕರ ಬಯಕೆಯಾಗಿದ್ದು, ಇದನ್ನು ನಾವು ಕೇಂದ್ರ ನಾಯಕತ್ವಕ್ಕೆ ತಿಳಿಸಿದ್ದೇವೆ ಎಂದು ಮಣಿಪುರದ ಮಾಜಿ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಶುಕ್ರವಾರ ಹೇಳಿದ್ದಾರೆ.
ಇಂಫಾಲದಲ್ಲಿರುವ ಬಿಜೆಪಿ ರಾಜ್ಯ ಕಚೇರಿಯಲ್ಲಿ ನಡೆದ ‘ವಂದೇ ಮಾತರಂ’ ಗಾಯನದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. ‘ರಾಜ್ಯದಲ್ಲಿ ಸರ್ಕಾರ ರಚಿಸಲು ಶಾಸಕರೆಲ್ಲಾ ಒಂದಾಗಿದ್ದೇವೆ’ ಎಂದು ಹೇಳಿದ್ದಾರೆ.
‘ನಾವು ಇತ್ತೀಚೆಗೆ ದೆಹಲಿಗೆ ಹೋಗಿದ್ದೆವು. 25 ಶಾಸಕರು ಈಶಾನ್ಯ ವಲಯದ ಉಸ್ತುವಾರಿ ಸಂಬಿತ್ ಪಾತ್ರ ಅವರನ್ನು ಮಣಿಪುರ ಭವನದಲ್ಲಿ ಭೇಟಿಯಾಗಿದ್ದೆವು. ಜನರು ಜನಪ್ರಿಯ ಸರ್ಕಾರದ ಸ್ಥಾಪನೆಯನ್ನು ಬಯಸುತ್ತಿದ್ದಾರೆ. ಆಂತರಿಕವಾಗಿ ಸ್ಥಳಾಂತರಗೊಂಡವರ ಸಮಸ್ಯೆಗಳ ಬಗ್ಗೆಯೂ ಮಾತನಾಡಿದ್ದೇವೆ. ರಾಜ್ಯದಲ್ಲಿ ಪರಿಸ್ಥಿತಿ ಸುಧಾರಣೆಯಾಗಿರುವುದರಿಂದ ಈ ಬಗ್ಗೆ ಚರ್ಚಿಸಲಾಗುವುದು ಎಂದು ಅವರು ಹೇಳಿದ್ದಾರೆ’ ಎಂದು ಬಿರೇನ್ ಸಿಂಗ್ ತಿಳಿಸಿದ್ದಾರೆ.
‘ನಾವು ಆರು ಮಂದಿ ಪಕ್ಷದ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರನ್ನು ಭೇಟಿ ಮಾಡಿದ್ದೇವೆ. ಆದಷ್ಟು ಬೇಗ ಜನಪ್ರಿಯ ಸಚಿವಾಲಯವೊಂದನ್ನು ಸ್ಥಾಪಿಸಬೇಕು ಎಂದು ಜನರ ಹಾಗೂ ನಮ್ಮ ಬೇಡಿಕೆ ಎಂದು ಅವರಿಗೆ ಹೇಳಿದ್ದೇವೆ. ಬೇಡಿಕೆಯನ್ನು ಪರಿಗಣಿಸುವುದಾಗಿ ಹೇಳಿದರಲ್ಲದೇ, ಶೀಘ್ರವೇ ಇಂಫಾಲಕ್ಕೆ ಭೇಟಿ ನೀಡುವುದಾಗಿಯೂ ತಿಳಿಸಿದ್ದಾರೆ. ಎಲ್ಲವನ್ನೂ ಮಾಧ್ಯಮದ ಮುಂದೆ ಹೇಳಲಾಗುವುದಿಲ್ಲ’ ಎಂದು ಸಿಂಗ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.