ಮಣಿಪುರದಲ್ಲಿ ಮುಂದುವರಿದ ಪ್ರತಿಭಟನೆ, ಹಿಂಸಾಚಾರ
(ಪಿಟಿಐ ಚಿತ್ರ)
ಇಂಫಾಲ: ಮಣಿಪುರದಲ್ಲಿ ಭದ್ರತಾ ಸಿಬ್ಬಂದಿ ಮೇಲೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಂಬಾಯ್ ಟೆಂಗೋಲ್ ಸಂಘಟನೆಯ ಓರ್ವ ಸದಸ್ಯನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಇಂದು (ಬುಧವಾರ) ತಿಳಿಸಿದ್ದಾರೆ.
ಅರಂಬಾಯ್ ಟೆಂಗೋಲ್ ನಾಯಕ ಕನನ್ ಸಿಂಗ್ ಮತ್ತು ನಾಲ್ವರು ನಾಯಕರ ಬಂಧನವನ್ನು ಖಂಡಿಸಿ ವ್ಯಾಪಕ ಪ್ರತಿಭಟನೆ ಮುಂದುವರಿದಿದೆ. ಪ್ರತಿಭಟನಕಾರರು ಅರಂಬಾಯ್ ಟೆಂಗೋಲ್ ನಾಯಕರ ಬೇಷರತ್ ಬಿಡುಗಡೆಗೆ ಒತ್ತಾಯಿಸಿದ್ದಾರೆ.
ಜೂನ್ 9ರಂದು ಇಂಫಾಲ ಪಶ್ಚಿಮ ಜಿಲ್ಲೆಯಲ್ಲಿ ಪ್ರತಿಭಟನಕಾರರ ಜೊತೆ ನಡೆದ ಸಂಘರ್ಷದ ವೇಳೆ ಸಿಆರ್‌ಪಿಎಫ್ ಸಿಬ್ಬಂದಿ ಮೇಲೆ ಗುಂಡು ಹಾರಿಸಲಾಗಿತ್ತು. ಪ್ರಕರಣ ಸಂಬಂಧ ಆರೋಪಿ ರಾಜ್ ಬೋಯಿನಾವೊ ಪಂಗೈಜಮ್‌ನನ್ನು ನಿನ್ನೆ (ಮಂಗಳವಾರ) ಬಂಧಿಸಲಾಗಿದೆ.
ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಎಂಟು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇಂಫಾಲ ಪೂರ್ವ ಜಿಲ್ಲೆಯಲ್ಲಿ ನಡೆದ ಪ್ರತಿಭಟನೆ ಹಾಗೂ ಹಿಂಸಾಚಾರ ಪ್ರಕರಣದಲ್ಲಿ ಇತರೆ 19 ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2023ರಲ್ಲಿ ಮಣಿಪುರದಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯದ ನಡುವೆ ಆರಂಭಗೊಂಡಿದ್ದ ಜನಾಂಗೀಯ ಸಂಘರ್ಷ ಈವರೆಗೆ 260 ಜನರ ಸಾವು ಮತ್ತು ಸಾವಿರಾರು ಜನರ ನಿರ್ವಸತಿಗೆ ಕಾರಣವಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಎನ್. ಬಿರೇನ್ ಸಿಂಗ್ ರಾಜೀನಾಮೆ ಬಳಿಕ ಫೆಬ್ರುವರಿ 13ರಂದು ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.