ಮಣಿಪುರದ ಚುರಚಾಂದಪುರದಲ್ಲಿ ನಿರಾಶ್ರಿತರ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿ ಆಶ್ರಯ ಪಡೆದ ಬಾಲಕಿಯೊಂದಿಗೆ ಸಮಾಲೋಚನೆ ನಡೆಸಿದರು
ಪಿಟಿಐ ಚಿತ್ರ
ಇಂಫಾಲ್: ‘ಮಣಿಪುರ ಬೆಟ್ಟಗುಡ್ಡ ಹಾಗೂ ಕಣಿವೆಯ ಜನರ ನಡುವೆ ನಂಬಿಕೆಯ ಸೇತುವೆ ನಿರ್ಮಿಸುವುದು ಅಗತ್ಯವಾದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಜನಾಂಗೀಯ ಸಂಘರ್ಷದಿಂದ ನಲುಗಿರುವ ಮಣಿಪುರಕ್ಕೆ ಮೊದಲ ಭೇಟಿ ನೀಡಿರುವ ಪ್ರಧಾನಿ ಅವರು ಇಂಫಾಲದ ಕಂಗ್ಲಾ ಕೋಟೆಯಿಂದ ರಾಜ್ಯದ ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ.
‘ಭಾರತ ಮಾತೆಯ ಮುಕುಟುದ ಮಣಿ ಮಣಿಪುರ. ಇಲ್ಲಿ ಯಾವುದೇ ರೀತಿಯ ಹಿಂಸಾಚಾರ ಖಂಡನೀಯ. ಇದು ದುರದೃಷ್ಟಕರ ಮಾತ್ರವಲ್ಲ, ನಮ್ಮ ಪೂರ್ವಜರು ಮತ್ತು ಭವಿಷ್ಯದ ತಲೆಮಾರಿಗೆ ಮಾಡುವ ಅನ್ಯಾಯವಾಗಿದೆ. ನಾವೆಲ್ಲರೂ ಜತೆಗೂಡಿ ಮಣಿಪುರವನ್ನು ಶಾಂತಿ ಮತ್ತು ಅಭಿವೃದ್ಧಿಯೆಡೆಗೆ ತೆಗೆದುಕೊಂಡು ಹೋಗಬೇಕಿದೆ’ ಎಂದಿದ್ದಾರೆ.
‘ಮಣಿಪುರದ ಜನರಿಗೆ ಆಗಿರುವ ಆಘಾತಕ್ಕೆ ಪರಿಹಾರ ಕಲ್ಪಿಸುವ ಹಾಗೂ ಅವರ ಆತ್ಮವಿಶ್ವಾಸವನ್ನು ಮರಳಿ ತರುವ ಪ್ರಾಮಾಣಿಕ ಪ್ರಯತ್ನಕ್ಕೆ ಸರ್ಕಾರ ಬದ್ಧವಾಗಿದೆ. ಆಪರೇಷನ್ ಸಿಂಧೂರದಲ್ಲಿ ಮಣಿಪುರದ ಪುತ್ರರು ಪ್ರಮುಖ ಪಾತ್ರ ವಹಿಸಿದ್ದಾರೆ. 21ನೇ ಶತಮಾನ ಈಶಾನ್ಯ ರಾಜ್ಯಗಳಿಗೆ ಸೇರಿದ್ದಾಗಿದೆ’ ಎಂದು ಮೋದಿ ಬಣ್ಣಿಸಿದ್ದಾರೆ.
2023ರ ಮೇನಿಂದ ಮಣಿಪುರದಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯದ ನಡುವೆ ಆರಂಭವಾದ ಜನಾಂಗೀಯ ಸಂಘರ್ಷದ ನಂತರ ರಾಜ್ಯಕ್ಕೆ ನೀಡಿದ ಮೊದಲ ಭೇಟಿಯಾಗಿದೆ. ಮೈತೇಯಿ ಸಮುದಾಯವರು ಇಂಫಾಲದ ಕಣಿವೆಗಳಲ್ಲಿ ವಾಸಿಸುತ್ತಿದ್ದರೆ, ಕುಕಿ ಸಮುದಾಯದ ಜನರು ಪಕ್ಕದ ಪರ್ವತ ಪ್ರದೇಶದಲ್ಲಿ ನೆಲೆಸಿದ್ದಾರೆ. 864 ದಿನಗಳ ಹಿಂಸಾಚಾರದಲ್ಲಿ 300 ಜನ ಮೃತಪಟ್ಟಿದ್ದಾರೆ. 67 ಸಾವಿರ ಜನ ಸ್ಥಳಾಂತರಗೊಂಡಿದ್ದಾರೆ. 1,500ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.