ADVERTISEMENT

ಸಿಸೋಡಿಯಾ ಸುಳ್ಳು ಪ್ರಕರಣದಲ್ಲಿ ಜೈಲು ಸೇರುತ್ತಾರೆ ಎಂಬುದು ಗೊತ್ತು: ಕೇಜ್ರಿವಾಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಜುಲೈ 2022, 9:16 IST
Last Updated 22 ಜುಲೈ 2022, 9:16 IST
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್   

ನವದೆಹಲಿ: ದೆಹಲಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ವಿರುದ್ಧದ ಭ್ರಷ್ಟಾಚಾರ ಆರೋಪಗಳು ಆಧಾರ ರಹಿತವಾದವು ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ಹೇಳಿದ್ದಾರೆ.

ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ.ಸಕ್ಸೇನಾ ಅವರು ನಿಯಮ ಉಲ್ಲಂಘನೆ ಹಾಗೂ ಕಾರ್ಯವಿಧಾನದಲ್ಲಿನ ಲೋಪಗಳಿಗೆ ಸಂಬಂಧಿಸಿದಂತೆ ಸರ್ಕಾರದ ಅಬಕಾರಿ ನೀತಿ 2021–22 ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಿದ್ದಾರೆ. ಇಲಾಖೆಯಲ್ಲಿನ ಭ್ರಷ್ಟಾಚಾರದಲ್ಲಿ ಉಪಮುಖ್ಯಮಂತ್ರಿ ಸಿಸೋಡಿಯಾ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಕೇಜ್ರಿವಾಲ್‌ ಪ್ರತಿಕ್ರಿಯೆ ನೀಡಿದ್ದಾರೆ.

'ಇಡೀ ಪ್ರಕರಣವೇ ಸುಳ್ಳು. ಕಳೆದ 22 ವರ್ಷಗಳಿಂದ ನಾನು ಸಿಸೋಡಿಯಾ ಅವರನ್ನು ಬಲ್ಲೆ. ಅವರು ಪ್ರಾಮಾಣಿಕ. ಅವರು ಸಚಿವರಾದಾಗ ದೆಹಲಿಯ ಸರ್ಕಾರಿ ಶಾಲೆಗಳು ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿದ್ದವು. ಅಂತಹ ಶಾಲೆಗಳನ್ನು ನ್ಯಾಯಾದೀಶರ ಮಕ್ಕಳು ಮತ್ತು ಆಟೋ ರಿಕ್ಷಾ ಚಾಲಕರ ಮಕ್ಕಳು ಒಟ್ಟಿಗೆ ಕೂಡಿ ಓದುವಂತಹ ಸ್ಥಿತಿಗೆ ತರಲು ಸಿಸೋಡಿಯಾ ಹಗಲು ರಾತ್ರಿ ದುಡಿದಿದ್ದಾರೆ' ಎಂದಿದ್ದಾರೆ.

ADVERTISEMENT

ಸಿಸೋಡಿಯಾ ಅವರು 'ಸುಳ್ಳು' ಪ್ರಕರಣದಲ್ಲಿ ಶೀಘ್ರದಲ್ಲೇ ಬಂಧನಕ್ಕೊಳಗಾಗಲಿದ್ದಾರೆ ಎಂಬುದು ಗೊತ್ತಿದೆ ಎಂದೂ ಹೇಳಿದ್ದಾರೆ.

'ಜೈಲುಗಳ ಬಗ್ಗೆ, ಕುಣಿಕೆಯ ಬಗ್ಗೆ ನಮಗೆ ಭಯವಿಲ್ಲ. ನಮ್ಮವರ ವಿರುದ್ಧ ಅವರು ಸಾಕಷ್ಟು ಪ್ರಕರಣಗಳನ್ನು ಸೃಷ್ಟಿಸಲಿದ್ದಾರೆ. ಪಂಜಾಬ್‌ನಲ್ಲಿ ಗೆದ್ದ ಬಳಿಕ ಎಎಪಿ ಬೆಳೆಯುತ್ತಿದೆ. ನಾವು ರಾಷ್ಟ್ರಮಟ್ಟದಲ್ಲಿ ಬೆಳೆಯುವುದನ್ನು ಅವರಿಗೆ ಸಹಿಸಲು ಆಗುತ್ತಿಲ್ಲ. ಆದರೆ, ನಮ್ಮನ್ನು ಯಾವುದೂ ತಡೆಯಲಾರದು' ಎಂದು ಕೇಂದ್ರ ಸರ್ಕಾರದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ಹೊಸ ಅಬಕಾರಿ ನೀತಿ 2021–22 ಅನ್ನು ಕಳೆದ ವರ್ಷ ನವೆಂಬರ್‌ 17ರಂದು ಜಾರಿಗೊಳಿಸಲಾಗಿತ್ತು. ಅದರಂತೆ ನಗರದಾದ್ಯಂತ 32 ವಲಯಗಳಲ್ಲಿ 849 ಚಿಲ್ಲರೆ ಮಾರಾಟ ಪರವಾನಗಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.