ADVERTISEMENT

₹2 ಸಾವಿರ ಕೋಟಿ ವಂಚನೆ ಹಗರಣ: ಸಿಸೋಡಿಯಾ, ಜೈನ್‌ಗೆ ಎಸಿಬಿ ಸಮನ್ಸ್‌

ಪಿಟಿಐ
Published 4 ಜೂನ್ 2025, 23:30 IST
Last Updated 4 ಜೂನ್ 2025, 23:30 IST
ಮನೀಷ್‌ ಸಿಸೋಡಿಯಾ
ಮನೀಷ್‌ ಸಿಸೋಡಿಯಾ   

ನವದೆಹಲಿ: ಎಎಪಿ ನಾಯಕರಾದ ಸತ್ಯೇಂದರ್‌ ಜೈನ್‌ ಹಾಗೂ ಮನೀಷ್‌ ಸಿಸೋಡಿಯಾಗೆ ವಿಚಾರಣೆಗೆ ಹಾಜರಾಗುವಂತೆ ಎಸಿಬಿಯು ಬುಧವಾರ ಸಮನ್ಸ್‌ ನೀಡಿದೆ.

ದೆಹಲಿಯ ಸರ್ಕಾರಿ ಶಾಲೆಗಳಲ್ಲಿ 12 ಸಾವಿರಕ್ಕೂ ಹೆಚ್ಚು ತರಗತಿ ಕೊಠಡಿಗಳ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿಯ ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ) ಈ ಸಮನ್ಸ್‌ ಹೊರಡಿಸಿದೆ.

ಇದೇ 6ರಂದು ವಿಚಾರಣೆಗೆ ಹಾಜರಾಗಿ ಎಂದು ಜೈನ್‌ಗೆ ತಿಳಿಸಲಾಗಿದ್ದು, 9ರಂದು ಹಾಜರಾಗುವಂತೆ ಸಿಸೋಡಿಯಾಗೆ ಸೂಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಈ ಹಿಂದಿನ ಎಎಪಿ ಸರ್ಕಾರದ ಆಡಳಿತದಲ್ಲಿ ಮನೀಷ್‌ ಸಿಸೋಡಿಯಾ ಹಣಕಾಸು ಮತ್ತು ಶಿಕ್ಷಣ ಖಾತೆ ಹೊಂದಿದ್ದರೆ, ಸತ್ಯೇಂದರ್‌ ಜೈನ್‌ ಲೋಕೋಪಯೋಗಿ ಇಲಾಖೆ ಮತ್ತು ಇತರ ಸಚಿವಾಲಯಗಳ ಉಸ್ತುವಾರಿ ವಹಿಸಿಕೊಂಡಿದ್ದರು.

‘ಕೇಂದ್ರ ಜಾಗೃತ ಆಯೋಗದ (ಸಿವಿಸಿ) ಮುಖ್ಯ ತಾಂತ್ರಿಕ ಪರೀಕ್ಷಕರು ಈ ಯೋಜನೆಗೆ ಸಂಬಂಧಿಸಿದಂತೆ ವರದಿಯೊಂದನ್ನು ನೀಡಿದ್ದಾರೆ. ಇದರಲ್ಲಿ ಅನೇಕ ಲೋಪಗಳನ್ನು ಉಲ್ಲೇಖಿಸಿದ್ದಾರೆ. ಇದು ಮೂರು ವರ್ಷಗಳಿಂದಲೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಆರೋಪಿಸಲಾಗಿದೆ’ ಎಂದು ಎಸಿಬಿಯ ಜಂಟಿ ಪೊಲೀಸ್ ಆಯುಕ್ತ ಮಧುರ ವರ್ಮಾ ತಿಳಿಸಿದ್ದಾರೆ.

ಸಕ್ಷಮ ಪ್ರಾಧಿಕಾರದಿಂದ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್‌ 17–ಎ ಅಡಿಯಲ್ಲಿ ಅನುಮೋದನೆ ಪಡೆದ ನಂತರ ಎಫ್‌ಐಆರ್‌ ದಾಖಲಿಸಲಾಗಿದೆ ಎಂದಿದ್ದಾರೆ.

ದೆಹಲಿಯ ಮೂರು ವಲಯಗಳಲ್ಲಿ ತರಗತಿ ಕೊಠಡಿಗಳ ನಿರ್ಮಾಣದಲ್ಲಿ ಅಕ್ರಮ ನಡೆದಿದೆ ಎಂದು ದೂರಿ, 2019ರಲ್ಲಿ ಬಿಜೆಪಿ ನಾಯಕರಾದ ಕಪಿಲ್‌ ಮಿಶ್ರಾ, ಹರೀಶ್‌ ಖುರಾನಾ ಮತ್ತು ನೀಲಕಂಠ ಬಕ್ಷಿ ಎಸಿಬಿಗೆ ದೂರು ನೀಡಿದ್ದರು.

ದೂರಿನ ಪ್ರಕಾರ, ಪ್ರತಿ ಕೊಠಡಿ ನಿರ್ಮಾಣದ ಸರಾಸರಿ ವೆಚ್ಚ ₹24.86 ಲಕ್ಷ. ಆದರೆ ಇದಕ್ಕಿಂತ ₹5 ಲಕ್ಷ ಹೆಚ್ಚಿನ ವೆಚ್ಚ ತೋರಿಸಲಾಗಿದೆ. ಈ ಕುರಿತಂತೆ ತನಿಖೆ ನಡೆಯುತ್ತಿದ್ದು, ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.