ನರೇಂದ್ರ ಮೋದಿ
(ಪಿಟಿಐ ಚಿತ್ರ)
ನವದೆಹಲಿ: ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ಖಂಡಿತವಾಗಿಯೂ ನ್ಯಾಯ ಸಿಗುತ್ತದೆ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, 26 ನಾಗರಿಕರ ಹತ್ಯೆಯ ಹಿಂದಿರುವ ಭಯೋತ್ಪಾದಕರು ಮತ್ತು ಸಂಚುಕೋರರನ್ನು ಹುಡುಕಿ ಕಠಿಣ ಶಿಕ್ಷೆಗೆ ನೀಡಲಾಗುವುದು ಎಂಬುದನ್ನು ಪುನರುಚ್ಚರಿಸಿದರು.
‘ಮನದ ಮಾತು’ ಮಾಸಿಕ ರೇಡಿಯೊ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದ ಅವರು,ಕಾಶ್ಮೀರದ ಪ್ರಸಿದ್ಧ ಪ್ರವಾಸಿ ತಾಣದಲ್ಲಿ ನಡೆದ ದಾಳಿಯು ಭಯೋತ್ಪಾದನೆಯನ್ನು ಪೋಷಿಸುವವರ ಹತಾಶೆ ಮತ್ತು ಹೇಡಿತನವನ್ನು ತೋರಿಸುತ್ತದೆ ಎಂದು ಪಾಕಿಸ್ತಾನದ ಹೆಸರು ಹೇಳದೆಯೇ ಟೀಕಿಸಿದರು.
‘ಕಾಶ್ಮೀರದಲ್ಲಿ ಮೂಲಸೌಕರ್ಯಗಳ ನಿರ್ಮಾಣ ಕಾರ್ಯ ವೇಗ ಪಡೆದುಕೊಂಡಿದೆ. ಪ್ರವಾಸಿಗರ ಸಂಖ್ಯೆಯಲ್ಲಿ ದಾಖಲೆ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿದೆ’ ಎಂದರು.
‘ಜಮ್ಮು ಮತ್ತು ಕಾಶ್ಮೀರದಲ್ಲಿ ಆಗಿರುವ ಬದಲಾವಣೆ ಮತ್ತು ಅಲ್ಲಿ ನಡೆಯುತ್ತಿರುವ ಅಭಿವೃದ್ಧಿ ಚಟುವಟಿಕೆಗಳು ದೇಶದ ಶತ್ರುಗಳಿಗೆ ಇಷ್ಟವಾಗಲಿಲ್ಲ. ಆದ್ದರಿಂದ ಇಂತಹ ದೊಡ್ಡ ದಾಳಿ ನಡೆಸಿದರು’ ಎಂದು ಹೇಳಿದರು.
ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಇಡೀ ಜಗತ್ತು 140 ಕೋಟಿ ಭಾರತೀಯರೊಂದಿಗೆ ನಿಂತಿದೆ
ದಾಳಿಯನ್ನು ಇಡೀ ಜಗತ್ತು ಖಂಡಿಸಿದೆ. ವಿವಿಧ ದೇಶಗಳ ನಾಯಕರು ನನಗೆ ಕರೆ ಮಾಡಿ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ
ಭಯೋತ್ಪಾದಕರು ಕಾಶ್ಮೀರವನ್ನು ಮತ್ತೆ ನಾಶಪಡಿಸಲು ಬಯಸುತ್ತಾರೆ
ಕಸ್ತೂರಿ ರಂಗನ್ ಕೊಡುಗೆಗಳು ಸದಾ ಸ್ಮರಣೀಯ...
ಇದೇ ಸಂದರ್ಭದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮಾಜಿ ಅಧ್ಯಕ್ಷ, ವಿಜ್ಞಾನಿ ಕೆ.ಕಸ್ತೂರಿ ರಂಗನ್ ನಿಧನದ ಹಿನ್ನೆಲೆಯಲ್ಲಿ ಅವರ ಸಾಧನೆಗಳನ್ನು ಪ್ರಧಾನಿ ಮೋದಿ ಮೆಲುಕು ಹಾಕಿದ್ದಾರೆ.
'ಕಸ್ತೂರಿ ರಂಗನ್ ಅವರನ್ನು ಭೇಟಿಯಾದಾಗೆಲ್ಲ ದೇಶದ ಯುವಜನತೆ, ಪ್ರತಿಭೆ, ಆಧುನಿಕ ಶಿಕ್ಷಣ, ಬಾಹ್ಯಾಕಾಶ ಮತ್ತು ವಿಜ್ಞಾನದ ಕುರಿತು ಚರ್ಚಿಸುತ್ತಿದ್ದೆ. ದೇಶದ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಅವರು ನೀಡಿದ ಕೊಡುಗೆಯನ್ನು ಸದಾ ಸ್ಮರಿಸುತ್ತೇವೆ' ಎಂದು ಪ್ರಧಾನಿ ಹೇಳಿದ್ದಾರೆ.
'ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸುವಲ್ಲಿ ಕಸ್ತೂರಿ ರಂಗನ್ ಮಹತ್ವದ ಪಾತ್ರ ವಹಿಸಿದ್ದರು. ದೇಶಕ್ಕೆ ಅವರ ನಿಸ್ವಾರ್ಥ ಸೇವೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ನೀಡಿದ ಕೊಡುಗೆಗಳು ಸ್ಮರಣೀಯ. ಅವರಿಗೆ ನನ್ನ ನಮನಗಳು' ಎಂದು ಪ್ರಧಾನಿ ಸಂತಾಪ ಸೂಚಿಸಿದ್ದಾರೆ.
ಜಾಗತಿಕ ಬಾಹ್ಯಾಕಾಶ ಶಕ್ತಿ...
'ಭಾರತ ಈಗ ಜಾಗತಿಕ ಬಾಹ್ಯಾಕಾಶ ಶಕ್ತಿಯಾಗಿ ಬೆಳೆದಿದೆ. ಒಂದೇ ಕಾರ್ಯಾಚರಣೆಯಲ್ಲಿ 104 ಉಪ್ರಗಹಗಳನ್ನು ಉಡ್ಡಯನ ಮಾಡುವ ಮೂಲಕ ದಾಖಲೆ ಬರೆದಿದ್ದೇವೆ. ಭಾರತ ಚಂದ್ರನ ದಕ್ಷಿಣ ಧ್ರುವ ತಲುಪಿದ ಮೊದಲ ದೇಶವಾಗಿದೆ. ಮಂಗಳ ಕಕ್ಷೆಯ ಯೋಜನೆಯನ್ನು ಪ್ರಾರಂಭಿಸಿದ್ದೇವೆ' ಎಂದು ಪ್ರಧಾನಿ ಹೇಳಿದ್ದಾರೆ.
'ಆಪರೇಷನ್ ಬ್ರಹ್ಮ'
ಮ್ಯಾನ್ಮಾರ್‌ನಲ್ಲಿ ನಡೆದ ಭೀಕರ ಭೂಕಂಪದ ಸಂದರ್ಭದಲ್ಲಿ ನೆರವಿನ ಹಸ್ತ ಚಾಚಿರುವ ಕುರಿತಾಗಿಯೂ ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದಾರೆ.
'ಮ್ಯಾನ್ಮಾರ್ ಭೂಕಂಪದಲ್ಲಿ ಅಪಾರ ನಾಶ-ನಷ್ಟ ಉಂಟಾಗಿದೆ. ಸಂತ್ರಸ್ತರಿಗೆ ನೆರವಿಗಾಗಿ ಭಾರತವು 'ಆಪರೇಷನ್ ಬ್ರಹ್ಮ' ಕಾರ್ಯಾಚರಣೆಯನ್ನು ಆರಂಭಿಸಿತು. ಆಪರೇಷನ್ ಬ್ರಹ್ಮದಲ್ಲಿ ಭಾಗಿಯಾದ ಎಲ್ಲರ ಬಗ್ಗೆ ನನಗೆ ತುಂಬಾ ಹೆಮ್ಮೆಯಿದೆ. ಮಾವನೀಯತೆಗೆ ಸೇವೆ ಸಲ್ಲಿಸುವ ವಿಷಯ ಬಂದಾಗ ಭಾರತ ಸದಾ ಮುಂಚೂಣಿಯಲ್ಲಿದೆ ಮತ್ತು ಸದಾ ಇರುತ್ತದೆ' ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.