ADVERTISEMENT

ಮೊದಲ ದಿನ ಗೊಂದಲ: ಹಲವು ವಿಮಾನ ರದ್ದು

ರಾಜ್ಯಗಳ ನೀತಿಯಲ್ಲಿ ಸ್ಪಷ್ಟತೆಯ ಕೊರತೆ: ಪ್ರಯಾಣಿಕರಿಗೆ ಸಂಕಷ್ಟ

ಪಿಟಿಐ
Published 25 ಮೇ 2020, 19:50 IST
Last Updated 25 ಮೇ 2020, 19:50 IST
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ತಪಾಸಣೆ
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ತಪಾಸಣೆ   

ನವದೆಹಲಿ: ದೇಶದ ಕೆಲವು ಪ್ರಮುಖ ವಿಮಾನ ನಿಲ್ದಾಣಗಳಿಂದ ಸೋಮವಾರ ದೇಶೀಯ ವಿಮಾನಯಾನ ಸೇವೆ ಆರಂಭಿಸಲಾಗಿದೆ.

ಆದರೆ, ಕೆಲವು ರಾಜ್ಯಗಳು ಪ್ರಯಾಣಕ್ಕೆ ಅವಕಾಶ ನೀಡದಿರುವುದರಿಂದ, ಗೊಂದಲ ಸೃಷ್ಟಿಯಾಗಿ, 80ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಪಡಿಸಿದ್ದರಿಂದ ನೂರಾರು ಪ್ರಯಾಣಿಕರು ತೊಂದರೆಗೆ ಸಿಲುಕಿದರು.

ಎರಡು ತಿಂಗಳ ಬಳಿಕ, ಸೋಮವಾರ ನಸುಕಿನ 4.45ಕ್ಕೆ ದೆಹಲಿ ವಿಮಾನ ನಿಲ್ದಾಣದಿಂದ ಪುಣೆಯ ಕಡೆಗೆ ಮೊದಲ ವಿಮಾನವು ಆರಾಟ ನಡೆಸಿತು. ಮುಂಬೈ ವಿಮಾನ ನಿಲ್ದಾಣದಿಂದ ಮೊದಲ ವಿಮಾನವು ಬೆಳಿಗ್ಗೆ 6.45ಕ್ಕೆ ಪಟ್ನಾದ ಕಡೆಗೆ ಹಾರಾಟ ನಡೆಸಿತು.

ADVERTISEMENT

ದೇಶೀಯ ವಿಮಾನ ಯಾನಕ್ಕೆ ಷರತ್ತುಬದ್ಧ ಅನುಮತಿ ನೀಡಿದ ಬಳಿಕ, ವಿಮಾನ ಯಾನ ಸಂಸ್ಥೆಗಳು ಟಿಕೆಟ್‌ ಕಾಯ್ದಿರಿಸುವ ಪ್ರಕ್ರಿಯೆ ಆರಂಭಿಸಿದ್ದವು. ಕೊರೊನಾದ ತೀವ್ರ ದಾಳಿಗೆ ಒಳಗಾಗಿರುವ ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳದಂಥ ಕೆಲವು ರಾಜ್ಯಗಳು ವಿಮಾನ ಹಾರಾಟಕ್ಕೆ ಅನುಮತಿ ನೀಡದ ಕಾರಣ, ಹಲವು ವಿಮಾನಗಳನ್ನು ಸೋಮವಾರ ರದ್ದುಪಡಿಸಬೇಕಾಯಿತು.

ಪ್ರಯಾಣಿಕರ ಪ್ರತ್ಯೇಕವಾಸಕ್ಕೆ ಸಂಬಂಧಿಸಿದಂತೆ ರಾಜ್ಯಗಳಲ್ಲಿ ಏಕಪ್ರಕಾರದ ನಿಯಮಾವಳಿಗಳು ಇಲ್ಲದಿರುವುದೂ ವಿಮಾನಯಾನ ಸಂಸ್ಥೆಗಳನ್ನು ಗೊಂದಲಕ್ಕೆ ದೂಡಿತ್ತು. ಪರರಾಜ್ಯಗಳಿಂದ ಬರುವ ಪ್ರಯಾಣಿಕರಿಗೆ ಕೆಲವು ರಾಜ್ಯಗಳು ಸಾಂಸ್ಥಿಕ ಪ್ರತ್ಯೇಕವಾಸವನ್ನು ಕಡ್ಡಾಯಗೊಳಿಸಿದ್ದರೆ, ಇನ್ನೂ ಕೆಲವು ರಾಜ್ಯಗಳು ಮನೆಯಲ್ಲೇ ಪ್ರತ್ಯೇಕ ವಾಸ ಮಾಡಬೇಕು ಎಂಬ ನಿಯಮ ವಿಧಿಸಿವೆ. ಕೆಲವು ರಾಜ್ಯಗಳು ಸ್ಪಷ್ಟ ನಿಯಮವನ್ನು ಇನ್ನೂ ರೂಪಿಸಿಲ್ಲ. ದೆಹಲಿ ವಿಮಾನ ನಿಲ್ದಾಣ ಒಂದರಲ್ಲೇ ಒಳಬರುವ ಮತ್ತು ಹೊರಹೋಗುವ ಒಟ್ಟು 82 ವಿಮಾನಗಳು ರದ್ದಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೇ 28ರ ನಂತರವೇ ವಿಮಾನ ಯಾನಕ್ಕೆ ಅನುಮತಿ ನೀಡಲು ಪಶ್ಚಿಮ ಬಂಗಾಳ ಸರ್ಕಾರ ಭಾನುವಾರ ತೀರ್ಮಾನಿಸಿತ್ತು. ಕನಿಷ್ಠ ಸಂಖ್ಯೆಯ ವಿಮಾನಗಳಿಗೆ ಮಾತ್ರ ಅವಕಾಶ ನೀಡುವುದಾಗಿ ಆಂಧ್ರಪ್ರದೇಶ ಸರ್ಕಾರವು ಭಾನುವಾರ ಹೇಳಿದ್ದರೂ, ಸೋಮವಾರ ವಿಮಾನಗಳ ಹಾರಾಟಕ್ಕೆ ಅವಕಾಶ ನೀಡಲಿಲ್ಲ. ಆಂಧ್ರದಲ್ಲಿ ಮಂಗಳವಾರದಿಂದ ವಿಮಾನ ಹಾರಾಟ ಆರಂಭವಾಗುವ ನಿರೀಕ್ಷೆ ಇದೆ.

‘ಸೋಮವಾರ ತಮ್ಮ ಸಂಸ್ಥೆಯ ವಿಮಾನಗಳಲ್ಲಿ ಒಟ್ಟು 20,000 ಮಂದಿ ಪ್ರಯಾಣಿಸಿದ್ದಾರೆ’ ಎಂದು ಇಂಡಿಗೊ ಸಂಸ್ಥೆಯ ವಕ್ತಾರ ತಿಳಿಸಿದ್ದಾರೆ. ‘ಸರ್ಕಾರದ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ನಾವು ಯಾವುದೇ ಗೊಂದಲಗಳಿಲ್ಲದೆ ಸೇವೆಯನ್ನು ಆರಂಭಿಸಿದ್ದೇವೆ ಎನ್ನಲು ಖುಷಿಯಾಗುತ್ತಿದೆ’ ಎಂದು ಸ್ಪೈಸ್‌ಜೆಟ್‌ ಸಂಸ್ಥೆಯ ಅಧ್ಯಕ್ಷ ಹಾಗೂ ಆಡಳಿಯ ನಿರ್ದೇಶಕ ಅಜಯ್‌ ಸಿಂಗ್‌ ತಿಳಿಸಿದರು.

ಮರೆತ ಅಂತರ: ಕಳವಳ

ಕೊರೊನಾ ಕಾರಣದಿಂದ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಏರ್‌ ಇಂಡಿಯಾದ ವಿಮಾನಗಳಲ್ಲಿ ಮಧ್ಯದ ಸೀಟ್‌ನಲ್ಲೂ ಪ್ರಯಾಣಿಕರನ್ನು ಕೂರಿಸಲು ಅನುಮತಿ ನೀಡುವ ಸರ್ಕಾರದ ನಿರ್ಧಾರದ ಬಗ್ಗೆ ಸುಪ್ರೀಂ ಕೋರ್ಟ್‌ ಕಳವಳ ವ್ಯಕ್ತಪಡಿಸಿದೆ.

‘ಅಂತರ ಕಾಯ್ದುಕೊಳ್ಳುವ ಕ್ರಮವನ್ನು ಸರ್ಕಾರ ನಿರ್ಲಕ್ಷಿಸಬಾರದು. ಭುಜಕ್ಕೆ ಭುಜ ತಗುಲುವಂತೆ ಕುಳಿತುಕೊಳ್ಳುವುದು ಅಪಾಯಕಾರಿ. ಸರ್ಕಾರವು ಜನರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕೇ ವಿನಾ ವಾಣಿಜ್ಯ ವಿಮಾನಯಾನ ಸಂಸ್ಥೆಗಳ ಬಗ್ಗೆ ಅಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ, ನ್ಯಾಯಮೂರ್ತಿಗಳಾದ ಎ.ಎಸ್‌. ಬೋಪಣ್ಣ ಹಾಗೂ ಋಷಿಕೇಶ ರಾಯ್‌ ಅವರನ್ನೊಳಗೊಂಡ ಪೀಠ ಹೇಳಿದೆ.

ಈ ವಿಚಾರವಾಗಿ ಬಾಂಬೆ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ ಮೊರೆಹೋಗಿತ್ತು. ‘ಹೈಕೋರ್ಟ್‌ ಆದೇಶದಿಂದಾಗಿ ಟಿಕೆಟ್‌ ಕಾಯ್ದಿರಿಸಿದವರಲ್ಲಿ ಆತಂಕ ಉಂಟಾಗಿದೆ. ಮಧ್ಯದ ಸೀಟ್‌ ಲಭಿಸಿರುವವರ ಟಿಕೆಟ್‌ ರದ್ದು ಮಾಡಬೇಕಾಗುತ್ತದೆ. ವಿದೇಶದಲ್ಲಿ ಸಿಲುಕಿಕೊಂಡಿರುವವರ ಸ್ಥಿತಿಯ ಬಗ್ಗೆಯೂ ನಾವು ಯೋಚನೆ ಮಾಡಬೇಕು’ ಎಂದು ಏರ್‌ಇಂಡಿಯಾ ಪರ ವಾದಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಹೇಳಿದರು.

ಕೊನೆಗೆ, ಜೂನ್‌ 6ರವರೆಗೆ ಹಾರಾಟ ನಡೆಸಲಿರುವ ವಿಮಾನಗಳಿಗೆ ಮಾತ್ರ ಅಂತರ ಕಾಯ್ದುಕೊಳ್ಳುವುದರಿಂದ ವಿನಾಯಿತಿ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.