ADVERTISEMENT

ಮಿಜೋರಾಂ: ರೈಲ್ವೆ ಸೇತುವೆ ನಿರ್ಮಾಣದ ವೇಳೆ ಕ್ರೇನ್‌ ಕುಸಿದು 17 ಕಾರ್ಮಿಕರು ಸಾವು

ಪಿಟಿಐ
Published 23 ಆಗಸ್ಟ್ 2023, 7:55 IST
Last Updated 23 ಆಗಸ್ಟ್ 2023, 7:55 IST
 ರೈಲ್ವೆ ಮೇಲ್ಸೇತುವೆ ಕುಸಿದಿರುವುದು
ರೈಲ್ವೆ ಮೇಲ್ಸೇತುವೆ ಕುಸಿದಿರುವುದು   ಪಿಟಿಐ ಚಿತ್ರ

ನವದೆಹಲಿ/ಐಜ್ವಾಲ್ (ಮಿಜೋರಾಂ): ಮಿಜೋರಾಂ ರಾಜಧಾನಿ ಐಜ್ವಾಲ್‌ ಸಮೀಪದ ಸೈರಂಗ ಬಳಿ ರೈಲ್ವೆ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ವೇಳೆ, ಕ್ರೇನ್‌ ಕುಸಿದು ಕನಿಷ್ಠ 17 ಕಾರ್ಮಿಕರು ಬುಧವಾರ ಮೃತಪಟ್ಟಿದ್ದಾರೆ.

‘ಐಜ್ವಾಲ್‌ನಿಂದ 21 ಕಿ.ಮೀ. ದೂರದಲ್ಲಿ ಕುರುಂಗ್ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸುವ ವೇಳೆ ಈ ದುರ್ಘಟನೆ ಸಂಭವಿಸಿದೆ. 35–40 ಮಂದಿ ಕಾರ್ಮಿಕರು ಕಾಮಗಾರಿಯಲ್ಲಿ ತೊಡಗಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

‘ಸೇತುವೆ ಕುಸಿದಿಲ್ಲ. ನಿರ್ಮಾಣ ಕಾರ್ಯಕ್ಕಾಗಿ ಬಳಸಿದ್ದ ಸಂಚಾರಿ ಕ್ರೇನ್‌ (ಗ್ಯಾಂಟ್ರಿ) ಕುಸಿದಿದ್ದೇ ಈ ಅವಘಡಕ್ಕೆ ಕಾರಣ’ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ನಿರ್ಮಾಣದ ವೇಳೆ ಸೇತುವೆ ಭಾಗಗಳು ಅಥವಾ ಉಕ್ಕಿನ ತೊಲೆಗಳನ್ನು ಎತ್ತಿಹಿಡಿಯಲು ಗ್ಯಾಂಟ್ರಿಗಳನ್ನು ಬಳಸಲಾಗುತ್ತದೆ.

‘ದುರ್ಘಟನೆ ಕುರಿತು ತನಿಖೆಗಾಗಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಈ ಗ್ಯಾಂಟ್ರಿಯನ್ನು ಎಸ್‌ಟಿಯುಪಿ ಕನ್ಸಲ್ಟಂಟ್ ಕಂಪನಿ ವಿನ್ಯಾಸಗೊಳಿಸಿದ್ದು, ಐಐಟಿ–ಗುವಾಹಟಿ ತಜ್ಞರು ಪರಿಶೀಲನೆ ನಡೆಸಿದ್ದರು’ ಎಂದು ರೈಲ್ವೆ ವಕ್ತಾರರೊಬ್ಬರು ತಿಳಿಸಿದ್ದಾರೆ.

ಮಿಜೋರಾಂನಲ್ಲಿ ಕೈಗೆತ್ತಿಕೊಂಡಿರುವ ಭೈರವಿ–ಸೈರಂಗ ರೈಲು ಮಾರ್ಗವು 130 ಸೇತುವೆಗಳು, 23 ಸುರಂಗಗಳು ಹಾಗೂ ನಾಲ್ಕು ನಿಲ್ದಾಣಗಳನ್ನು ಒಳಗೊಂಡಿದೆ.

ಶೋಕ–ಪರಿಹಾರ ಘೋಷಣೆ: ‘ಮಿಜೋರಾಂನಲ್ಲಿ ಸಂಭವಿಸಿದ ಅವಘಡದಲ್ಲಿ 17 ಮಂದಿ ಕಾರ್ಮಿಕರು ಮೃತಪಟ್ಟಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಶೋಕ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ತಲಾ ₹ 2 ಲಕ್ಷ, ಗಾಯಗೊಂಡವರಿಗೆ ತಲಾ ₹ 50 ಸಾವಿರ ಪರಿಹಾರ ಘೋಷಿಸಿದ್ದಾರೆ’ ಎಂದು ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ತಿಳಿಸಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು ಮೃತರ ಕುಟುಂಬಕ್ಕೆ ತಲಾ ₹10 ಲಕ್ಷ, ಗಾಯಗೊಂಡವರಿಗೆ ₹2 ಲಕ್ಷ ಪರಿಹಾರ ಘೋಷಿಸಿದ್ದಾರೆ.

ಮಿಜೋರಾಂ ಮುಖ್ಯಮಂತ್ರಿ ಝೋರಂಥಾಂಗ್ ಅವರು ಕೂಡ ಘಟನೆ ಕುರಿತು ಆಘಾತ ವ್ಯಕ್ತಪಡಿಸಿದ್ದಾರೆ. ಅವಘಡದಿಂದಾಗಿ ಅವಶೇಷಗಳಗಡಿ ಸಿಲುಕಿದ್ದವರ ರಕ್ಷಣಾ ಕಾರ್ಯದಲ್ಲಿ ನೆರವಾದವರಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಘಟನೆ ಕುರಿತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಘಾತ ವ್ಯಕ್ತಪಡಿಸಿದ್ದು, ‘ಮೃತರಲ್ಲಿ ಕೆಲವರು ರಾಜ್ಯದ ಮಾಲ್ಡಾ ಜಿಲ್ಲೆಯವರಿದ್ದಾರೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.