ಸಾಂದರ್ಭಿಕ ಚಿತ್ರ
ಸುಕ್ಮಾ (ಛತ್ತೀಸಗಢ): ಛತ್ತೀಸಗಢದ ಸುಕ್ಮಾದಲ್ಲಿ ಭದ್ರತಾ ಪಡೆಗಳು ಶನಿವಾರ ನಡೆಸಿದ ಮಾವೋವಾದಿ ನಿಗ್ರಹ ಕಾರ್ಯಾಚರಣೆಯಲ್ಲಿ 16 ಮಂದಿ ನಕ್ಸಲರು ಮೃತಪಟ್ಟಿದ್ದಾರೆ. ಈ ವೇಳೆ ಇಬ್ಬರು ಯೋಧರು ಗಾಯಗೊಂಡಿದ್ದಾರೆ.
‘ಕೆರ್ಲಾಪಾಲ್ ಪೊಲೀಸ್ ಠಾಣಾ ವ್ಯಾಪ‍್ತಿಯ ಅರಣ್ಯ ಪ್ರದೇಶದಲ್ಲಿ ಬೆಳಿಗ್ಗೆ 8 ಗಂಟೆಗೆ ಶೋಧ ಕಾರ್ಯ ನಡೆಸುತ್ತಿದ್ದ ವೇಳೆ ಗುಂಡಿನ ಚಕಮಕಿ ನಡೆಯಿತು. ಸ್ಥಳದಿಂದ 16 ಮಂದಿ ನಕ್ಸಲರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಬಸ್ತಾರ್ ವಿಭಾಗದ ಐಜಿಪಿ ಪಿ.ಸುಂದರ್‌ರಾಜ್ ತಿಳಿಸಿದರು.
‘ಕೆರ್ಲಾಪಾಲ್ ಪ್ರದೇಶದಲ್ಲಿ ನಕ್ಸಲರಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ, ಶುಕ್ರವಾರದಿಂದಲೇ ಡಿಆರ್‌ಜಿ ಹಾಗೂ ಕೇಂದ್ರಿಯ ಮೀಸಲು ಪೊಲೀಸ್ ಪಡೆಯ ಯೋಧರು ಕಾರ್ಯಾಚರಣೆ ಆರಂಭಿಸಿದ್ದರು. ಶನಿವಾರ ಬೆಳಿಗ್ಗೆ ಎರಡು ಕಡೆಗಳಲ್ಲಿ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಇಬ್ಬರು ಡಿಆರ್‌ಜಿ ಸಿಬ್ಬಂದಿಗೆ ಸಣ್ಣ ಪುಟ್ಟ ಗಾಯಗಳಾಗಿವೆ’ ಎಂದರು.
‘ಎನ್‌ಕೌಂಟರ್ ನಡೆದ ಸ್ಥಳದಲ್ಲಿ ಎ.ಕೆ–47 ರೈಫಲ್ಸ್, ಎಸ್‌ಎಲ್‌ಆರ್ ರೈಫಲ್ಸ್, ಇನ್ಸಾಸ್ ರೈಫಲ್ಸ್, 303 ರೈಫಲ್ಸ್, ರಾಕೆಟ್ ಲಾಂಚರ್, ಗ್ರೆನೇಡ್ ಲಾಂಚರ್ ಸೇರಿದಂತೆ ದೊಡ್ಡ ಸಂಖ್ಯೆಯಲ್ಲಿ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಸ್ಥಳದಲ್ಲಿ ಶೋಧ ಕಾರ್ಯ ಮುಂದುವರಿದಿದೆ’ ಎಂದು ಸುಂದರ್‌ರಾಜ್ ಹೇಳಿದರು.
ಈ ವರ್ಷ ರಾಜ್ಯದ ವಿವಿಧೆಡೆ ನಡೆದ ಎನ್‌ಕೌಂಟರ್‌ನಲ್ಲಿ 132 ಮಂದಿ ನಕ್ಸಲರು ಮೃತಪಟ್ಟಿದ್ದಾರೆ. ಏಳು ಜಿಲ್ಲೆಗಳನ್ನು ಹೊಂದಿರುವ ಬಸ್ತರ್ ವಿಭಾಗದಲ್ಲಿಯೇ 116 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಶಸ್ತ್ರಾಸ್ತ್ರ ಹಾಗೂ ಹಿಂಸೆಯಿಂದ ಯಾವುದೇ ಬದಲಾವಣೆ ತರಲು ಸಾಧ್ಯವಿಲ್ಲ. ಶಾಂತಿ ಹಾಗೂ ಅಭಿವೃದ್ಧಿಯಿಂದ ಮಾತ್ರ ಸಾಧ್ಯಅಮಿತ್ ಶಾ ಕೇಂದ್ರ ಗೃಹ ಸಚಿವ (ನಕ್ಸಲರ ವಿರುದ್ಧ ಎನ್‌ಕೌಂಟರ್ ನಡೆದ ಬಳಿಕ ನೀಡಿದ ಪ್ರತಿಕ್ರಿಯೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.