ಸುಕ್ಮಾ: ಒಟ್ಟಾರೆ ₹38 ಲಕ್ಷ ಇನಾಮು ಘೋಷಣೆಯಾಗಿದ್ದ 10 ನಕ್ಸಲರು ಸೇರಿದಂತೆ 18 ನಕ್ಸಲರು ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ಭದ್ರತಾ ಪಡೆ ಎದುರು ಶರಣಾಗಿದ್ದಾರೆ.
ಟೊಳ್ಳು ಮತ್ತು ಅಮಾನವೀಯ ಮಾವೋವಾದಿ ಸಿದ್ಧಾಂತ ಮತ್ತು ಸ್ಥಳೀಯ ಬುಡಕಟ್ಟು ಜನಾಂಗದವರ ಮೇಲೆ ನಡೆಸಿದ ದೌರ್ಜನ್ಯಗಳಿಂದ ನಿರಾಶೆಗೊಂಡ ಕೆಲ ನಕ್ಸಲರು ಹಿರಿಯ ಪೊಲೀಸ್ ಮತ್ತು ಸಿಆರ್‌ಪಿಎಫ್ ಅಧಿಕಾರಿಗಳ ಮುಂದೆ ಶರಣಾದರು ಎಂದು ಸುಕ್ಮಾ ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಚವ್ಹಾಣ್ ಹೇಳಿದರು.
ದೂರದ ಹಳ್ಳಿಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿರುವ ರಾಜ್ಯ ಸರ್ಕಾರದ 'ನಿಯದ್ ನೆಲ್ಲನಾರ್' ಯೋಜನೆ ಮತ್ತು ಹೊಸ ಶರಣಾಗತಿ ಹಾಗೂ ಪುನರ್ವಸತಿ ನೀತಿಯಿಂದ ಅವರು ಪ್ರಭಾವಿತರಾಗಿದ್ದಾರೆ ಎಂದು ಅವರು ಹೇಳಿದರು.
ಶರಣಾದ ನಕ್ಸಲರ ಪೈಕಿ ಮಾವೋವಾದಿಗಳ ಪಿಎಲ್‌ಜಿಎ ಬೆಟಾಲಿಯನ್ ಸಂಖ್ಯೆ 1ರಲ್ಲಿ ಪ್ಲಟೂನ್ ಪಾರ್ಟಿ ಕಮಿಟಿ ಸದಸ್ಯ ಮಡ್ಕಮ್ ಆಯ್ತಾ (25) ಮತ್ತು ಅದೇ ಬೆಟಾಲಿಯನ್‌ನ ಕಮಿಟಿ ಸದಸ್ಯ ಭಾಸ್ಕರ್ ಅಲಿಯಾಸ್ ಭೋಗಮ್ ಲಖಾ (26) ಅವರ ಬಗ್ಗೆ ಸುಳಿವು ನೀಡಿದವರಿಗೆ ತಲಾ ₹8 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು.
ಮಾವೋವಾದಿಗಳ ಪ್ರದೇಶ ಸಮಿತಿ ಸದಸ್ಯರಾದ ಮಡ್ಕಮ್ ಕಮ್ಲು (25) ಮತ್ತು ಲಕ್ಷ್ಮಣ್ ಅಲಿಯಾಸ್ ಮದ್ವಿ ಛನ್ನು (28) ಅವರ ಬಗ್ಗೆ ಸುಳಿವು ನೀಡಿದವರಿಗೆ ತಲಾ ₹5 ಲಕ್ಷ ಬಹುಮಾನವನ್ನು ಘೋಷಿಸಲಾಗಿತ್ತು. ಇತರ ಆರು ಜನರಿಗೆ ತಲಾ ₹2 ಲಕ್ಷ ಇನಾಮು ಘೋಷಣೆಯಾಗಿತ್ತು ಎಂದು ಅವರು ಹೇಳಿದ್ದಾರೆ.
ಶರಣಾದ ನಕ್ಸಲರಿಗೆ ತಲಾ ₹50,000 ನೆರವು ನೀಡಲಾಗಿದ್ದು, ಸರ್ಕಾರದ ನೀತಿಯ ಪ್ರಕಾರ ಅವರಿಗೆ ಹೆಚ್ಚಿನ ಪುನರ್ವಸತಿ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕಳೆದ ವರ್ಷ, ಸುಕ್ಮಾ ಸೇರಿದಂತೆ ಏಳು ಜಿಲ್ಲೆಗಳನ್ನು ಒಳಗೊಂಡಿರುವ ಬಸ್ತಾರ್ ಪ್ರದೇಶದಲ್ಲಿ 792 ನಕ್ಸಲರು ಶರಣಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.