ಕಾಲುವೆಯ ಸುರಂಗ ಕುಸಿತ
Credit: iStock Photo
ಹೈದರಾಬಾದ್: ತೆಲಂಗಾಣದ ನಾಗರಕರ್ನೂಲ್ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿರುವ ಶ್ರೀಶೈಲಂ ಎಡ ದಂಡೆ ಕಾಲುವೆಯ (ಎಸ್‌ಎಲ್‌ಬಿಸಿ) ಸುರಂಗದ ಮೇಲ್ಫಾವಣಿಯು ಶನಿವಾರ ಕುಸಿದಿದ್ದು, ಸುರಂಗದೊಳಗೆ 8 ಕಾರ್ಮಿಕರು ಸಿಲುಕಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ನೀರಾವರಿ ಸಚಿವ ಎನ್.ಉತ್ತಮ್ ಕುಮಾರ್ ರೆಡ್ಡಿ ಸೇರಿದಂತೆ ಇಲಾಖೆಯು ಪ್ರಮುಖ ಅಧಿಕಾರಿ ಘಟನಾ ಸ್ಥಳಕ್ಕೆ ತಲುಪಿದರು. ಘಟನೆಯ ಕುರಿತು ಮಾಹಿತಿ ಪಡೆದುಕೊಂಡ ಬಳಿಕ ಸಚಿವರು ಪ್ರರ್ತಕರ್ತರೊಂದಿಗೆ ಮಾತನಾಡಿದರು.
‘ಇಬ್ಬರು ಎಂಜಿನಿಯರ್‌ಗಳು, ಇಬ್ಬರು ಯಂತ್ರ ಆಪರೇಟರ್‌ಗಳು, ನಾಲ್ವರು ಕಾರ್ಮಿಕರು ಸುರಂಗದಲ್ಲಿ ಸಿಕುಲಿದ್ದಾರೆ. ಸುರಂಗದಲ್ಲಿ ಸಿಲುಕಿರುವವರ ರಕ್ಷಣೆಗೆ ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕಳೆದ ವರ್ಷ ಉತ್ತರಾಖಂಡದಲ್ಲಿ ಹೆದ್ದಾರಿ ನಿರ್ಮಾನದ ವೇಳೆ ಸುರಂಗದಲ್ಲಿ ಸಿಲುಕಿ ಕೊಂಡಿದ್ದವರನ್ನು ರಕ್ಷಿಸಿದ್ದ ತಂಡವನ್ನೇ ಇಲ್ಲಿಯೂ ಕರೆಸಿಕೊಳ್ಳುವ ಯತ್ನ ನಡೆಸಲಾಗುತ್ತಿದೆ’ ಎಂದರು.
ಘಟನೆ ಬಗ್ಗೆ ಕೇಂದ್ರ ಕಲ್ಲಿದ್ದಲು ಸಚಿವ ಜಿ.ಕೃಷ್ಣಾ ರೆಡ್ಡಿ ಅವರು ಮಾಹಿತಿ ಪಡೆದುಕೊಂಡಿದ್ದಾರೆ.
ಸರ್ಕಾರಿ ಒಡೆತನದ ಸಿಂಗರೇಣಿ ಕೊಯಿಲರೀಸ್ ಕಂಪನಿಯ 19 ಸದಸ್ಯರ ತಂಡವು ರಕ್ಷಣಾ ಕಾರ್ಯ ನಡೆಸಲು ಘಟನಾ ಸ್ಥಳ ತಲುಪಿದೆ. ‘ಸುರಂಗದೊಳಗೆ ಸಿಲುಕಿರು ವವರ ರಕ್ಷಣಾ ಕಾರ್ಯಕ್ಕೆ ಬೇಕಾಗಿರುವ ಅತ್ಯಾಧುನಿಕ ಉಪಕರಣಗಳು ನಮ್ಮ ಬಳಿ ಇವೆ’ ಎಂದು ಕಂಪನಿ ಹೇಳಿಕೊಂಡಿದೆ.
ಕಾಲುವೆ ನಿರ್ಮಿಸುತ್ತಿರುವ ಕಂಪನಿಯು ಈಗಾಗಲೇ ತನ್ನ ಸಿಬ್ಬಂದಿಯನ್ನು ಸುರಂಗದೊಳಗೆ ಇಳಿಸಿ, ಪರಿಶೀಲನೆ ನಡೆಸಿದೆ.
ಘಟನೆ ನಡೆದದ್ದು ಹೇಗೆ?
‘ಕಾಲುವೆ ನಿರ್ಮಾಣಕ್ಕೆ ಕೊರೆಯಲಾಗಿದ್ದ ಸುರಂಗದ 14 ಕಿ.ಮೀ ಆಳದಲ್ಲಿ ಸಿಬ್ಬಂದಿ ಸಿಲುಕಿದ್ದಾರೆ. ಸುರಂಗದೊಳಗೆ ಸಣ್ಣ ಪ್ರಮಾಣದಲ್ಲಿ ನೀರು ಜಿನುಗಲು ಆರಂಭವಾಯಿತು. ಬಳಿಕ, ಈ ಪ್ರಮಾಣ ಹೆಚ್ಚಾಯಿತು. ಒಳಗೆ ಕೆಲಸ ಮಾಡುತ್ತಿದ್ದ ಹಲವು ಕಾರ್ಮಿಕರು ತಕ್ಷಣವೇ ಹೊರಗೆ ಬಂದರು’ ಎಂದು ಸಚಿವ ಉತ್ತಮ್ ಕುಮಾರ್ ವಿವರಿಸಿದರು. ‘ಸುರಂಗದಿಂದ ಹೊರಗೆ ಬರುತ್ತಿ ದ್ದಂತೆಯೇ ದೊಡ್ಡ ಶಬ್ದ ಕೇಳಿಸಿತು.ಟನಲ್ ಬೋರಿಂಗ್ ಯಂತ್ರದ ಸಮೀಪ ಕೆಲಸ ಮಾಡುತ್ತಿದ್ದ 8 ಮಂದಿ ಸಿಲುಕಿಕೊಂಡರು’ ಎಂದು ಮಾಹಿತಿ ನೀಡಿದರು.
ರಕ್ಷಣೆ ಹೇಗೆ?: ‘ಸೇನೆ ಹಾಗೂ ಎನ್‌ಡಿಆರ್‌ಎಫ್ ನೆರವನ್ನು ಕೋರಲಾಗಿದೆ. ಜೊತೆಗೆ, ರಾಜ್ಯದ ಅಗ್ನಿಶಾಮಕ ದಳ ಮತ್ತು ವಿಪತ್ತು ನಿರ್ವಹಣಾ ಪಡೆಯು ರಕ್ಷಣಾ ಕಾರ್ಯದಲ್ಲಿ ತೊಡಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.