ADVERTISEMENT

ದೆಹಲಿಯಲ್ಲಿ ಮತ್ತೊಂದು ಅಗ್ನಿ ಅವಘಡ: ಕರೋಲ್‌ ಬಾಗ್‌ ಮಾರುಕಟ್ಟೆಯಲ್ಲಿ ಬೆಂಕಿ 

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜೂನ್ 2022, 6:13 IST
Last Updated 12 ಜೂನ್ 2022, 6:13 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ದೆಹಲಿ ಕರೋಲ್‌ ಬಾಗ್‌ನ ಗಫ್ಫಾರ್‌ ಮಾರುಕಟ್ಟೆಯಲ್ಲಿ ಭಾನುವಾರ ಭಾರೀ ಅಗ್ನಿ ಅವಘಡ ಸಂಭವಿಸಿದೆ. 39 ಅಗ್ನಿಶಾಮಕ ವಾಹನಗಳು ಹಾಗೂ ಸುಮಾರು 200 ಮಂದಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಗಫ್ಫಾರ್‌ನ ಶೂ ಮಾರುಕಟ್ಟೆಯಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಬೆಳಗಿನ ಜಾವ 4:16ಕ್ಕೆ ಕರೆ ಬಂದಿದ್ದಾಗಿ ದೆಹಲಿ ಅಗ್ನಿಶಾಮಕ ದಳದ ನಿರ್ದೇಶಕ ಅತುಲ್‌ ಗರ್ಗ್‌ ತಿಳಿಸಿದ್ದಾರೆ.

ಬೆಂಕಿ ಹರುಡುವುದನ್ನು ನಿಯಂತ್ರಿಸಲಾಗಿದ್ದು, ಜನರುಗಾಯಗೊಂಡಿರುವುದು ಅಥವಾ ಕಟ್ಟಡದಲ್ಲಿ ಸಿಲುಕಿರುವುದು ವರದಿಯಾಗಿಲ್ಲ. ಬೆಂಕಿ ಹೊತ್ತಲು ಕಾರಣ ಇನ್ನಷ್ಟೇ ತಿಳಿಯಬೇಕಿದೆ.

ADVERTISEMENT

ಬೆಳಿಗ್ಗೆ 4:15ಕ್ಕೆ ಬೆಂಕಿ ಕಾಣಿಸಿಕೊಂಡಿರುವುದು ಗೊತ್ತಾಯಿತು. ಅಗ್ನಿಶಾಮಕ ವಾಹನಗಳು ಅರ್ಧ ತಾಸು ತಡವಾಗಿಸ್ಥಳಕ್ಕೆ ಬಂದಿರುವುದಾಗಿ ಕರೋಲ್‌ ಬಾಗ್‌ ಹೋಲ್‌ಸೇಲ್‌ ಫೂಟ್‌ವೇರ್ ಅಸೋಸಿಯೇಷನ್‌ನ ಅಧ್ಯಕ್ಷ ಧರಂಪಾಲ್‌ ಅರೋರ ಹೇಳಿರುವುದಾಗಿ ವರದಿಯಾಗಿದೆ.

ಬೆಂಕಿಯಲ್ಲಿ ಆಗಿರುವ ಪ್ರಾಣಾಪಾಯಗಳ ಬಗ್ಗೆ ಈವರೆಗೂ ತಿಳಿದು ಬಂದಿಲ್ಲ. ಮೊದಲಿಗೆ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಅನಂತರ ಶೋಧ ಕಾರ್ಯಾಚರಣೆ ನಡೆಸುವುದಾಗಿ ಅಗ್ನಿಶಾಮಕ ದಳದ ಅಧಿಕಾರಿ ಸುನಿಲ್‌ ಚೌಧರಿ ಹೇಳಿದ್ದಾರೆ.

ಬೆಂಕಿಯಲ್ಲಿ ಸಿಲುಕಿದ್ದ ಕುಟುಂಬದ ಐದು ಜನರನ್ನು ಈಗಾಗಲೇ ರಕ್ಷಿಸಲಾಗಿದೆ. ಸುಮಾರು 15–16 ಅಂಗಡಿಗಳಿಗೆ ಹಾನಿಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಇತ್ತೀಚೆಗಷ್ಟೇ ದೆಹಲಿ ರೋಹಿಣಿ ಪ್ರದೇಶದಲ್ಲಿರುವ ಬ್ರಹ್ಮ ಶಕ್ತಿ ಆಸ್ಪತ್ರೆಯ ಮೂರನೇ ಮಹಡಿಯಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಅದರಿಂದಾಗಿ ಉಂಟಾದ ಆಮ್ಲಜನಕದ ಕೊರತೆಯಿಂದಾಗಿ 64 ವರ್ಷ ವಯಸ್ಸಿನ ರೋಗಿಯೊಬ್ಬರು ಸಾವಿಗೀಡಾದರು. ಅದರ ಬೆನ್ನಲ್ಲೇ ಇಂದು ಮತ್ತೊಂದು ಅಗ್ನಿ ಅವಘಡ ಸಂಭವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.