ADVERTISEMENT

ಅಸ್ಸಾಂನಲ್ಲಿ ಭಾರಿ ಅಗ್ನಿ ಅವಘಡ– 300ಕ್ಕೂ ಅಧಿಕ ಅಂಗಡಿಗಳು ಅಗ್ನಿಗಾಹುತಿ

ಪಿಟಿಐ
Published 17 ಫೆಬ್ರುವರಿ 2023, 11:36 IST
Last Updated 17 ಫೆಬ್ರುವರಿ 2023, 11:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಜೋರ್ಹತ್: ಅಸ್ಸಾಂನ ಜೋರ್ಹತ್ ಜಿಲ್ಲೆಯ ಚೌಕ್‌ ಬಜಾರ್‌ನಲ್ಲಿ ಗುರುವಾರ ರಾತ್ರಿ ಸಂಭವಿಸಿದ ಅಗ್ನಿ ದುರಂತದಲ್ಲಿ 300ಕ್ಕೂ ಹೆಚ್ಚು ಅಂಗಡಿಗಳು ಭಸ್ಮವಾಗಿವೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಪಟ್ಟಣದ ಹೃದಯಭಾಗದ ಚೌಕ್ ಬಜಾರ್‌ನಲ್ಲಿ ಬೆಂಕಿಯನ್ನು ಬಹುತೇಕ ನಿಯಂತ್ರಣಕ್ಕೆ ತರಲಾಗಿದ್ದು, ಅಗ್ನಿಶಾಮಕ ದಳದ 50 ಸಿಬ್ಬಂದಿ ಸುಮಾರು ಹತ್ತು ತಾಸು ಕಾರ್ಯಾಚರಣೆ ನಡೆಸಿದರು. ಶಾರ್ಟ್‌ ಸರ್ಕಿಟ್‌ನಿಂದ ಅವಘಡ ಸಂಭವಿಸಿರಬಹುದೆಂದು ಶಂಕಿಸಲಾಗಿದೆ ಎಂದು ಅವರು ಹೇಳಿದರು.

ಮಾಲೀಕರು ಅಂಗಡಿಗಳ ಬಾಗಿಲು ಮುಚ್ಚಿ ಮನೆಗೆ ತೆರಳಿದ್ದರಿಂದ ಯಾವುದೇ ಸಾವು, ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಅವಘಡದಲ್ಲಿ ದಿನಸಿ ವಸ್ತು ಮತ್ತು ಬಟ್ಟೆ ಅಂಗಡಿಗಳು ಹೆಚ್ಚು ಹಾನಿಯಾಗಿವೆ ಎಂದರು.

ADVERTISEMENT

ಸುಟ್ಟು ಕರಕಲಾದ ಅಂಗಡಿಗಳಲ್ಲಿ ಅಳಿದುಳಿದ ವಸ್ತುಗಳಿಗಾಗಿ ಮಾಲೀಕರು ಮತ್ತು ಸಿಬ್ಬಂದಿ ಹುಡುಕಾಟ ನಡೆಸುತ್ತಿರುವ ದೃಶ್ಯ ಶುಕ್ರವಾರ ಕಂಡು ಬಂತು.

ಪಾತ್ರೆ ಅಂಗಡಿ ಇಟ್ಟುಕೊಂಡಿರುವ 50 ವರ್ಷದ ಮೊಂಟು ಸೈಕಿಯಾ, ‘ನಮ್ಮ ಅಂಗಡಿಗಳನ್ನು ಮುಚ್ಚಿದ ನಂತರ ರಾತ್ರಿ 8.30ರ ಸುಮಾರಿಗೆ ಮನೆ ತಲುಪಿದೆವು. ಅರ್ಧ ಗಂಟೆ ನಂತರ ಬಜಾರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಸುದ್ದಿ ತಿಳಿಯಿತು. ಸ್ಥಳ ತಲುಪುವ ವೇಳೆಗೆ ಬೆಂಕಿ ಹಲವು ಅಂಗಡಿಗಳಿಗೆ ವ್ಯಾಪಿಸಿತ್ತು ’ ಎಂದರು.

‘ಕೋವಿಡ್‌ನಿಂದಾಗಿ ಈಗಾಗಲೇ ಭಾರಿ ನಷ್ಟ ಅನುಭವಿಸಿದ್ದೇವೆ. ಆದರೆ, ಈಗ ಬೆಂಕಿ ಅವಘಡ ನಮ್ಮನ್ನು ಬೀದಿಗೆ ತಂದಿದೆ. ಇನ್ನೂ ಎರಡು ಕುಟುಂಬಗಳು ನನ್ನ ಮೇಲೆ ಅವಲಂಬಿತವಾಗಿವೆ. ಮುಂದೆ ಏನು ಮಾಡಬೇಕೆಂದು ತಿಳಿದಿಲ್ಲ’ ಎಂದು ಮತ್ತೊಬ್ಬ ಅಂಗಡಿ ಮಾಲೀಕ ರಾಜೇಶ್ ಬರುವಾ ಹೇಳಿದರು.

ಅಗ್ನಿಶಾಮಕ ವಾಹನಗಳು ಸಮಯಕ್ಕೆ ಸರಿಯಾಗಿ ತಲುಪಿದ್ದರೆ ಹಾನಿಯ ಪ್ರಮಾಣವು ಇಷ್ಟು ದೊಡ್ಡದಾಗಿರುತ್ತಿರಲಿಲ್ಲ ಎಂದು ಕೆಲ ಅಂಗಡಿಯವರು ಆರೋಪಿಸಿದ್ದಾರೆ.

ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಜೋಗನ್ ಮೋಹನ್ ಮತ್ತು ಜೋರ್ಹತ್ ಜಿಲ್ಲಾಧಿಕಾರಿ ಪುಲಕ್ ಮಹಾಂತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಷ್ಟದ ಮೌಲ್ಯಮಾಪನ ಮಾಡಿದ ಬಳಿಕ ಸಹಾಯ ಮಾಡಲು ಸಾಧ್ಯವಿರುವ ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.