ADVERTISEMENT

ವಿವಿಪ್ಯಾಟ್ ತುಲನೆ ಹೆಚ್ಚಿಸಬೇಕೆಂಬ ಪ್ರತಿಪಕ್ಷಗಳ ಮನವಿ ತಿರಸ್ಕರಿಸಿದ ಸುಪ್ರೀಂ

ಲೋಕಸಭೆ ಚುನಾವಣೆ ಮತ ಎಣಿಕೆ ಪ್ರಕ್ರಿಯೆ

ಪಿಟಿಐ
Published 7 ಮೇ 2019, 8:43 IST
Last Updated 7 ಮೇ 2019, 8:43 IST
   

ನವದೆಹಲಿ:ಲೋಕಸಭೆ ಚುನಾವಣೆಯ ಮತ ಎಣಿಕೆ ವೇಳೆ ಪ್ರತಿ ವಿಧಾನಸಭಾ ಕ್ಷೇತ್ರದ ಶೇ 50ರಷ್ಟು ವಿವಿಪ್ಯಾಟ್‌ ಮತಚೀಟಿಗಳನ್ನು ಮತಯಂತ್ರಗಳಿಗೆ ತಾಳೆ ಮಾಡುವ ವಿಚಾರಕ್ಕೆ ಸಂಬಂಧಿಸಿ ಪ್ರತಿಪಕ್ಷಗಳು ಸಲ್ಲಿಸಿರುವ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಿರಸ್ಕರಿಸಿದೆ.

‘ಈ ಹಿಂದಿನ ತೀರ್ಪನ್ನು ಬದಲಾಯಿಸಲು ಒಲವು ಹೊಂದಿಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ನ್ಯಾಯಪೀಠ ಹೇಳಿತು.

ಆಂಧ್ರ ಪ್ರದೇಶದ ಮುಖ್ಯಮಂತ್ರಿಚಂದ್ರಬಾಬು ನಾಯ್ಡು ನೇತೃತ್ವದಲ್ಲಿ 21 ಪ್ರತಿಪಕ್ಷಗಳು ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದವು.

ADVERTISEMENT

ಅರ್ಜಿದಾರರ ಪರ ಹಿರಿಯ ವಕೀಲ ಎ.ಎಂ.ಸಿಘ್ವಿ ಅವರು, ‘ಪ್ರತಿ ವಿಧಾನಸಭಾ ಕ್ಷೇತ್ರದ ಕನಿಷ್ಠ 5 ಮತಗಟ್ಟೆಗಳ ವಿವಿಪ್ಯಾಟ್‌ಗಳನ್ನು ಮತಯಂತ್ರಕ್ಕೆ ತಾಳೆ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಇದು ಕೇವಲ ಶೇ 2ರಷ್ಟಾಗುತ್ತದೆ. ಇದನ್ನು ಕನಿಷ್ಠ ಶೇ 25ಕ್ಕೆ ಹೆಚ್ಚಿಸಬೇಕೆಂದು ಅರ್ಜಿದಾರರು ಬಯಸುತ್ತಿದ್ದಾರೆ’ ಎಂದು ವಾದ ಮಂಡಿಸಿದರು.

ಈ ಹಿಂದೆ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಪ್ರತಿಪಕ್ಷಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್,ತಾಳೆಮಾಡುವ ವಿವಿಪ್ಯಾಟ್‌ಗಳ ಸಂಖ್ಯೆಯನ್ನು ಹೆಚ್ಚಿಸಿದರೆ ಫಲಿತಾಂಶ ಘೋಷಣೆಗೆ ವಿಳಂಬವಾಗಬಹುದು ಎಂದಿತ್ತು. ಜತೆಗೆ, ಪ್ರತಿ ವಿಧಾನಸಭಾ ಕ್ಷೇತ್ರದ ಕನಿಷ್ಠ 5 ಮತಗಟ್ಟೆಗಳ ವಿವಿಪ್ಯಾಟ್‌ಗಳನ್ನು ಮತಯಂತ್ರಕ್ಕೆ ತಾಳೆ ಮಾಡುವಂತೆ ಏಪ್ರಿಲ್‌ 8ರಂದು ಚುನಾವಣಾ ಆಯೋಗಕ್ಕೆ ಸೂಚಿಸಿತ್ತು.ಆದರೆ, ಮೊದಲ 3 ಹಂತಗಳ ಚುನಾವಣೆಯಲ್ಲಿ ಅನೇಕ ಮತ ಯಂತ್ರಗಳು ಸರಿಯಾಗಿ ಕಾರ್ಯನಿರ್ವಹಿಸಿಲ್ಲ ಎಂಬ ದೂರು ದಾಖಲಾಗಿವೆ. ಹೀಗಾಗಿ ಏಪ್ರಿಲ್ 8ರ ಸೂಚನೆಯನ್ನು ಮರುಪರಿಶೀಲಿಸಬೇಕು ಎಂದು ಪ್ರತಿಪಕ್ಷಗಳು ಪುನಃ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.