ಸಾವು (ಪ್ರಾತಿನಿಧಿಕ ಚಿತ್ರ)
ಮಥುರಾ: ಮಥುರಾ-ಬೃಂದಾವನದಲ್ಲಿ ಒಳಚರಂಡಿ ಅಗೆಯುತ್ತಿದ್ದಾಗ ಮಣ್ಣಿನ ದಿಬ್ಬ ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಮಥುರಾ-ವೃಂದಾವನ ಪುರಸಭೆಯ ವಾರ್ಡ್ ಸಂಖ್ಯೆ 34 ರ ಪರಿಕ್ರಮ ಮಾರ್ಗದಲ್ಲಿರುವ ಶ್ಯಾಮ್ ಕುಟಿ ಬಳಿ ಶುಕ್ರವಾರ ರಾತ್ರಿ 11.30 ರ ಸುಮಾರಿಗೆ ಘಟನೆ ನಡೆದಿದೆ ಎಂದು ಬೃಂದಾವನದ ಠಾಣಾಧಿಕಾರಿ ಪ್ರಶಾಂತ್ ಕಪಿಲ್ ತಿಳಿಸಿದ್ದಾರೆ. ಸ್ಥಳದಲ್ಲಿ ಫಿರೋಜಾಬಾದ್ ಏಜೆನ್ಸಿಯು ಒಳಚರಂಡಿ ಮಾರ್ಗವನ್ನು ಅಗೆಯುವ ಕೆಲಸವನ್ನು ನಡೆಸುತ್ತಿದೆ.
ಫಿರೋಜಾಬಾದ್ ನಿವಾಸಿಗಳಾದ ನೌರಂಗಿ ಲಾಲ್ (34) ಮತ್ತು ವಿಜಯ್ ಸಿಂಗ್ ಜಾದೌನ್ (30) ಮೃತರು.
ಕಾರ್ಮಿಕರು ಒಳಚರಂಡಿ ಅಗೆಯುತ್ತಿದ್ದಾಗ ಬೃಹತ್ ಮಣ್ಣಿನ ದಿಬ್ಬವು ಅವರ ಮೇಲೆ ಕುಸಿದಿದ್ದು, ಅವರು ಅದರ ಕೆಳಗೆ ಹೂತು ಹೋಗಿದ್ದಾರೆ. ಹೊರತೆಗೆಯುವ ಹೊತ್ತಿಗೆ ಇಬ್ಬರೂ ಪ್ರಜ್ಞಾಹೀನರಾಗಿದ್ದರು. ಅವರನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು. ಅವರು ಸಾವಿಗೀಡಾಗಿದ್ದಾಗಿ ವೈದ್ಯರು ತಿಳಿಸಿದ್ದಾರೆ.
ಗುತ್ತಿಗೆದಾರ ಮತ್ತು ನಿಗಮದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಗನ ಸಾವು ಸಂಭವಿಸಿದೆ ಎಂದು ನೌರಂಗಿ ಲಾಲ್ ಅವರ ತಂದೆ ದೂರು ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.