
ಪಿಂಚಣಿ
ನವದೆಹಲಿ: ಉದ್ಯೋಗಿ ಪಿಂಚಣಿ ಯೋಜನೆ (ಇಪಿಎಸ್) 1995ರ ಅಡಿ ಗರಿಷ್ಠ ಪಿಂಚಣಿ ಕೋರಿ ಉದ್ಯೋಗಿಗಳು ಸಲ್ಲಿಸಿದ್ದ ಅರ್ಜಿಗಳಲ್ಲಿ ಶೇ 99ರಷ್ಟನ್ನು ನೌಕರರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್ಒ) ವಿಲೇವಾರಿ ಮಾಡಿದೆ.
ಸುಪ್ರೀಂ ಕೋರ್ಟ್ 2022ರ ನ.4ರಂದು ನೀಡಿರುವ ನಿರ್ದೇಶನಗಳನ್ನು ಸಮಯಕ್ಕೆ ಸರಿಯಾಗಿ ಜಾರಿಗೆ ತರಲು ಇಪಿಎಫ್‌ಒ ಕ್ರಮ ಕೈಗೊಂಡಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಖಾತೆಯ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರು ಲೋಕಸಭೆಗೆ ಲಿಖಿತ ಉತ್ತರದಲ್ಲಿ ಸೋಮವಾರ ತಿಳಿಸಿದ್ದಾರೆ.
ಉದ್ಯೋಗಿ ಮತ್ತು ಉದ್ಯೋಗದಾತ ಸಂಸ್ಥೆಯ ಜಂಟಿ ಘೋಷಣೆ ಸಲ್ಲಿಕೆಗೆ ಇಪಿಎಫ್‌ಒ ಆನ್‌ಲೈನ್‌ನಲ್ಲಿ 2023ರ ಜುಲೈ 11ರವರೆಗೂ ಸಮಯ ನೀಡಿತ್ತು. 17.49 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದವು. ಅದರಲ್ಲಿ ಸುಮಾರು 15.24 ಲಕ್ಷ ಅರ್ಜಿಗಳನ್ನು ಉದ್ಯೋಗದಾತರು 2025ರ ಜ.31ರೊಳಗೆ ಇಪಿಎಫ್‌ಒಗೆ ಸಲ್ಲಿಸಿದ್ದರು. ಸ್ವೀಕರಿಸಿದ ಅರ್ಜಿಗಳಲ್ಲಿ ಶೇ 99ರಷ್ಟನ್ನು 2025ರ ನ.24ರ ವೇಳೆಗೆ ನೌಕರರ ಭವಿಷ್ಯ ನಿಧಿ ಸಂಘಟನೆಯು ವಿಲೇವಾರಿ ಮಾಡಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
‘ಯೋಜನೆಯಡಿ 2,33,303 ಅರ್ಜಿದಾರರು ತಮ್ಮ ಪಾಲಿನ ಮೊತ್ತವನ್ನು ಪಾವತಿಸಿದ್ದು, ಇವರಲ್ಲಿ 96,274 ನೌಕರರು ಸೇವೆಯಲ್ಲಿ ಮುಂದುವರಿದಿದ್ದಾರೆ. 1,37,029 ಉದ್ಯೋಗಿಗಳು ಈಗಾಗಲೇ ನಿವೃತ್ತರಾಗಿದ್ದು, ಇವರಲ್ಲಿ 1,24,457 ಮಂದಿಗೆ ಪಿಂಚಣಿ ಪಾವತಿ ಆದೇಶ (ಪಿಪಿಒ) ನೀಡಲಾಗಿದೆ. 12,572 ಪಿಪಿಒಗಳು ಅಂತಿಮ ಹಂತದಲ್ಲಿವೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.