ರಾಹುಲ್ ಗಾಂಧಿ ಮತ್ತು ಮಾಯಾವತಿ
ಲಖನೌ: ‘ಕಾಂಗ್ರೆಸ್ ಅಧಿಕಾರವನ್ನು ಕಳೆದುಕೊಂಡ ಬಳಿಕ ರಾಹುಲ್ ಗಾಂಧಿ ಅವರು ಇದ್ದಕ್ಕಿದ್ದಂತೆ ದಲಿತ, ಬುಡಕಟ್ಟು ಹಾಗೂ ಹಿಂದುಳಿದ ಸಮುದಾಯಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ’ ಎಂದು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಅವರು ಟೀಕಿಸಿದ್ದಾರೆ.
‘ರಾಹುಲ್ ಅವರ ನೀತಿಗಳು ಹಾಗೂ ಅವರ ಪಕ್ಷದ ನಿರಂತರ ವಂಚನೆಯ ಉದ್ದೇಶಗಳು ಮೊಸಳೆಯ ಕಣ್ಣೀರನ್ನು ನೆನಪಿಸುತ್ತಿವೆ. ಅವರ ದಲಿತ ಕಾಳಜಿ ಸ್ವಾರ್ಥದಿಂದ ಕೂಡಿದೆ’ ಎಂದು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಶನಿವಾರ ಉಲ್ಲೇಖಿಸುವ ಮೂಲಕ ವಾಗ್ದಾಳಿ ನಡೆಸಿದ್ದಾರೆ.
‘ದೇಶದ ಅತ್ಯಂತ ಹಳೆಯ ಪಕ್ಷದ ನಡವಳಿಕೆಯೇ, ಈ ಸಮುದಾಯಗಳು ತಮ್ಮದೇ ಪಕ್ಷವನ್ನು ರಚಿಸಿಕೊಳ್ಳಲು ಪ್ರೇರಣೆ ನೀಡಿತು. ಇದರ ಪರಿಣಾಮವಾಗಿ ಉತ್ತರ ಪ್ರದೇಶ ಸೇರಿದಂತೆ ಪ್ರಮುಖ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಿಂದ ನಿರಂತರವಾಗಿ ಹೊರಗುಳಿದಿದೆ’ ಎಂದು ದಲಿತ ನಾಯಕಿ ಹೇಳಿದ್ದಾರೆ.
ಈ ಜನರ ರಾಜಕೀಯ, ಆರ್ಥಿಕ ಮತ್ತು ಮೀಸಲಾತಿ ಸಂಬಂಧಿತ ಆಕಾಂಕ್ಷೆಗಳನ್ನು ಈಡೇರಿಸುವಲ್ಲಿ ಕಾಂಗ್ರೆಸ್‌ನ ವೈಫಲ್ಯವನ್ನು ರಾಹುಲ್ ಗಾಂಧಿ ಒಪ್ಪಿಕೊಂಡಿದ್ದನ್ನು ಮಾಯಾವತಿ ತಳ್ಳಿಹಾಕಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಗಳ ಬಗ್ಗೆ ಕಾಂಗ್ರೆಸ್ ನಡೆದುಕೊಂಡಿರುವ ರೀತಿ ದುಃಖಕರವಾದುದು ಎಂದಿರುವ ಮಾಯಾವತಿ, ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧವೂ ಹರಿಹಾಯ್ದಿದ್ದಾರೆ. ಮೀಸಲಾತಿಯನ್ನು ನಿಷ್ಕ್ರಿಯಗೊಳಿಸಲು ಎಲ್ಲ ಜಾತಿವಾದಿ ಪಕ್ಷಗಳು ಒಂದಾಗುತ್ತವೆ ಎಂದಿದ್ದಾರೆ.
‘ಮೀಸಲಾತಿಯ ಸಂಪೂರ್ಣ ಪ್ರಯೋಜನಗಳನ್ನು ಕಾಂಗ್ರೆಸ್ ತಡೆಹಿಡಿದಿತ್ತು. ಸ್ವಾತಂತ್ರ್ಯ ದೊರೆತು ನಾಲ್ಕು ದಶಕ ಕಳೆದರೂ ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಿ ಗೌರವಿಸಲು ವಿಫಲವಾಗಿತ್ತು’ ಎಂದು ಕಿಡಿಕಾರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.