ADVERTISEMENT

‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆಗೆ ಮಾಯಾವತಿ ಬೆಂಬಲ

ಪಿಟಿಐ
Published 15 ಡಿಸೆಂಬರ್ 2024, 12:32 IST
Last Updated 15 ಡಿಸೆಂಬರ್ 2024, 12:32 IST
<div class="paragraphs"><p>ಮಾಯಾವತಿ&nbsp;</p></div>

ಮಾಯಾವತಿ 

   

ಲಖನೌ(ಉತ್ತರ ಪ್ರದೇಶ): ‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆಗೆ ಬೆಂಬಲ ವ್ಯಕ್ತಪಡಿಸಿರುವ ಬಹುಜನ ಸಮಾಜವಾದಿ ಪಕ್ಷದ(ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ, ಇತರ ಪಕ್ಷಗಳು ಮಸೂದೆಗೆ ಬೆಂಬಲ ನೀಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚುನಾವಣಾ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶವನ್ನು ಈ ಮಸೂದೆ ಹೊಂದಿದೆ. ಅಲ್ಲದೇ ಕಲ್ಯಾಣ ಕೆಲಸಗಳು ಯಾವುದೇ ಅಡೆತಡೆಯಿಲ್ಲದೇ ನಡೆಯುತ್ತದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

’ರಾಜಕೀಯವನ್ನು ಮೀರಿ ಎಲ್ಲಾ ಪಕ್ಷಗಳು ಈ ವಿಷಯದಲ್ಲಿ ದೇಶ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲಸ ಮಾಡುವುದು ಉತ್ತಮ’ ಎಂದು ಅವರು ಹೇಳಿದರು.

ಮುಂದುವರಿದು, ಎಸ್‌ಟಿ/ಎಸ್‌ಸಿ ಮೀಸಲಾತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳ ವಿರುದ್ಧ ಹರಿಹಾಯ್ದ ಅವರು, ‘ಮೀಸಲಾತಿ ವಿಚಾರದಲ್ಲಿ ಈ ಪಕ್ಷಗಳು ಮಾತನಾಡದೇ ಇರುವುದು ಒಳಿತು’ ಎಂದಿದ್ದಾರೆ.

‘ಲೋಕಸಭೆಯಲ್ಲಿ ಸಂವಿಧಾನದ ಕುರಿತು ಚರ್ಚೆ ವೇಳೆ ಆಡಳಿತ ಪಕ್ಷಗಳು ಮತ್ತು ವಿರೋಧ ಪಕ್ಷಗಳು... ವಿಶೇಷವಾಗಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ದಲಿತ ಮತ್ತು ಒಬಿಸಿ ಮತಗಳನ್ನು ಸೆಳೆಯಲು ಮೀಸಲಾತಿ ಬಗ್ಗೆ ಆಧಾರರಹಿತ ಮಾತುಗಳನ್ನಾಡಿವೆ. ಇದರಲ್ಲಿ ಒಂದೇ ಒಂದು ಸತ್ಯ ಇಲ್ಲ’ ಎಂದು ಕಿಡಿಕಾರಿದರು.

‘ಮೀಸಲಾತಿ ವಿಷಯದಲ್ಲಿ ಈ ಎರಡು ಪಕ್ಷಗಳು ಮಾತನಾಡದೇ ಇರುವುದು ಒಳ್ಳೆಯದು. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪರಿಶಿಷ್ಟ ಜಾತಿಗಳು (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಟಿ) ಸರ್ಕಾರಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವ ಸಾಂವಿಧಾನಿಕ ಮಸೂದೆಯನ್ನು ವಿರೋಧಿಸಿತ್ತು. ಈ ಮಸೂದೆಯ ಪ್ರತಿಯನ್ನು ಸಮಾಜವಾದಿ ಪಕ್ಷ ಸಂಸತ್ತಿನಲ್ಲಿ ಹರಿದು ಬಿಸಾಕಿತ್ತು. ಈಗಲೂ ಈ ಮಸೂದೆ ಅಂಗೀಕಾರವಾಗದೇ ಬಾಕಿ ಉಳಿದಿದೆ’ ಎಂದು ಹೇಳಿದರು.

ಇದೇ ವೇಳೆ ಆಡಳಿತ ಪಕ್ಷ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಮಾಯಾವತಿ, ‘ಬಿಜೆಪಿಯ ಮೀಸಲಾತಿ ವಿರೋಧಿ ಮನಸ್ಥಿತಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಹೀಗಾಗಿ ಮಸೂದೆ ಅಂಗೀಕರಿಸುವ ಗೋಜಿಗೆ ಹೋಗುತ್ತಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.