ADVERTISEMENT

ಅಸ್ಸಾಂ: ನಿವೃತ್ತ ಸೇನಾಧಿಕಾರಿಯನ್ನು ವಿದೇಶಿಯೆಂದು ಮುದ್ರೆಯೊತ್ತಿ ಬಂಧನ!

​ಪ್ರಜಾವಾಣಿ ವಾರ್ತೆ
Published 30 ಮೇ 2019, 12:17 IST
Last Updated 30 ಮೇ 2019, 12:17 IST
   

ಗುವಾಹಟಿ:ನಿವೃತ್ತ ಸೇನಾಧಿಕಾರಿ ಗುವಾಹಟಿ ನಿವಾಸಿ ಮೊಹಮ್ಮದ್ ಸನಾ ಉಲ್ಲಾಹ್ ಅವರನ್ನುಅಸ್ಸಾಂ ಪೊಲೀಸರು ರಾಷ್ಟ್ರೀಯತೆ ಪ್ರಶ್ನಿಸಿ ಬಂಧನಕ್ಕೊಳಪಡಿಸಿದ ಘಟನೆ ವರದಿಯಾಗಿದೆ.

ಸತ್‌ಗಾಂವ್‌ನಲ್ಲಿರುವ ನಿವಾಸಕ್ಕೆ ಬಂದ ಅಸ್ಸಾಪೊಲೀಸರು ಉಲ್ಲಾಹ್ ಅವರನ್ನು ವಿದೇಶಿ ಎಂದು ಮುದ್ರೆಯೊತ್ತಿ ಬಂಧಿಸಿದ್ದಾರೆ. ಮಂಗಳವಾರ ಈ ಘಟನೆ ನಡೆದಿದ್ದು ವಿದೇಶೀಯ ನ್ಯಾಯಮಂಡಳಿ (ಫಾರಿನ್ ಟ್ರಿಬ್ಯುನಲ್) ಆದೇಶದ ಮೇರೆಗೆ ಇವರ ಬಂಧನ ನಡೆದಿದೆ.

ಬಂಧಿಸಿದ ನಂತರಗೋಲ್‌ಪರಾದಲ್ಲಿರುವ ಬಂಧಿತರ ಕೇಂದ್ರಕ್ಕೆ ಪೊಲೀಸ್ ವಾಹನದಲ್ಲಿ ಕರೆದೊಯ್ಯುತ್ತಿದ್ದ ವೇಳೆ ರಾಯಿಟರ್ಸ್ ಜತೆ ಮಾತನಾಡಿದ ಉಲ್ಲಾಹ್, ನಾನು ಕುಸಿದುಹೋದೆ ಎಂದಿದ್ದಾರೆ. 30 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಕ್ಕೆ ನನಗೆ ಸಿಕ್ಕಿದ ಗೌರವ ಇದೇನಾ? ನಾನೊಬ್ಬ ಭಾರತೀಯ. ನಾನು ಯಾವತ್ತೂ ಭಾರತೀಯನಾಗಿಯೇ ಇರುತ್ತೇನೆ ಎಂದು ಹೇಳಿದ್ದಾರೆ.

ಅಸ್ಸಾಂ ಪೊಲೀಸರ ಗಡಿ ರಕ್ಷಣಾ ತಂಡದ ಹೆಚ್ಚುವರಿ ಇನ್ಸ್ಪೆಕ್ಟರ್ ಜವಾಬ್ದಾರಿಯನ್ನು ಉಲ್ಲಾಹ್ ನಿರ್ವಹಿಸುತ್ತಿದ್ದಾರೆ.

ಭಾರತೀಯ ಸೇನೆಯಲ್ಲಿ 30 ವರ್ಷ ಸೇವೆ ಸಲ್ಲಿಸಿದವರು ಅವರು. ಗೌರವಾನ್ವಿತ ಕ್ಯಾಪ್ಟನ್ ಆಗಿ 2017ರಲ್ಲಿ ನಿವೃತ್ತಿ ಹೊಂದಿದ ಅವರು ಅಸ್ಸಾಂ ಪೊಲೀಸರ ಗಡಿರಕ್ಷಣಾ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಉಲ್ಲಾಹ್ ಅವರ ನ್ಯಾಯವಾದಿ ಮತ್ತು ಕುಟುಂಬದ ಸದಸ್ಯರು ಹೇಳಿದ್ದಾರೆ.

ಅಸ್ಸಾಂನ ಕಾಮರೂಪ್ ಜಿಲ್ಲೆಯ ಕಲಹಿಕ್ಲಾಶ್ ಗ್ರಾಮದ ಮೊಹಮ್ಮದ್ ಅಲಿ ಅವರ ಪುತ್ರನಾಗಿ ಮೊಹಮ್ಮದ್ ಸೋನಾ ಉಲ್ಲಾಹ್ ಅವರು 1967, ಜುಲೈ 30ರಂದು ಜನಿಸಿದರು.1987ರಲ್ಲಿ ಭಾರತೀಯ ಸೇನೆ ಸೇರಿದ ಇವರು ಹಲವಾರು ಇಲಾಖೆಯಲ್ಲಿ ಕೆಲಸ ನಿರ್ವಹಿಸಿದ್ದಾರೆ. 2014ರಲ್ಲಿ ಜಿಸಿಒ ಆಗಿ ಬಡ್ತಿ ಹೊಂದಿರುವ ಬಗ್ಗೆ ರಾಷ್ಟ್ರಪತಿಗಳ ಸರ್ಟಿಫಿಕೇಟ್‌ನ್ನು ಇವರು ಪಡೆದಿದ್ದಾರೆ ಎಂದು ಉಲ್ಲಾಹ್ ಅವರ ವಕೀಲ ಸಾಹಿದುಲ್ ಇಸ್ಲಾಂ ಹೇಳಿದ್ದಾರೆ.

ನಿವೃತ್ತರಾದ ನಂತರ ಅವರು ಆಸ್ಸಾಂ ಪೊಲೀಸ್ ಪಡೆಗೆ ಸೇರಿದ್ದರು. ಆದಾಗ್ಯೂ ಉಲ್ಲಾಹ್ ಅವರ ರಾಷ್ಟ್ರೀಯತೆ ಪ್ರಶ್ನಿಸಿ ಅವರ ವಿರುದ್ದ ವಿದೇಶೀಯ ನ್ಯಾಯಮಂಡಳಿಯ ಪ್ರಕರಣ ದಾಖಲಿತ್ತು. ರಾಷ್ಟ್ರೀಯತೆಯನ್ನು ಸಾಬೀತು ಪಡಿಸುವುದಕ್ಕಾಗಿ ಎಲ್ಲ ದಾಖಲೆಗಳನ್ನು ಸಲ್ಲಿಸಿದ್ದರೂ ಅದನ್ನು ತಳ್ಳಿದ ನ್ಯಾಯಮಂಡಳಿ ಉಲ್ಲಾಹ್ ಅವರನ್ನು ವಿದೇಶಿ ಎಂದು ಹೇಳಿ ಬಂಧಿಸಿದೆ. ವಿದೇಶೀಯ ನ್ಯಾಯಮಂಡಳಿಯ ಆದೇಶವನ್ನು ಪ್ರಶ್ನಿಸಿ ನಾವು ಉನ್ನತ ನ್ಯಾಯಾಲಯದ ಮೆಟ್ಟಿಲೇರುತ್ತೇವೆ ಎಂದು ಇಸ್ಲಾಂ ಹೇಳಿದ್ದಾರೆ.

ಉಲ್ಲಾಹ್ ಅವರು ಕಾರ್ಗಿಲ್ ಯುದ್ದದಲ್ಲಿ ಭಾಗವಹಿಸಿದ್ದಾರೆ ಎಂದು ಬೊಕೊ ನಿವಾಸಿ, ಉಲ್ಲಾಹ್ ಅವರ ಸಂಬಂಧಿ ಮೊಹಮ್ಮದ್ ಅಜ್ಮಲ್ ಹಕ್ ಹೇಳಿದ್ದಾರೆ.2017ರಲ್ಲಿ ವಿದೇಶೀಯ ನ್ಯಾಯಮಂಡಳಿ ಹಕ್ ಅವರಿಗೂ ನೋಟಿಸ್ ನೀಡಿತ್ತು. ಹಕ್ ಅವರು ನಿವೃತ್ತ ಜೂನಿಯರ್ ಕಮಿಷನ್‌ಡ್ ಆಫೀಸರ್ ಆಗಿದ್ದಾರೆ.

ರಾಷ್ಟ್ರೀಯ ಪೌರತ್ವ ನೋಂದಣಿ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಭಾರತೀಯ ನಾಗರಿಕರಿಗೆ ದೌರ್ಜನ್ಯವೆಸಗುತ್ತಿರುವ ವರದಿ ಬಗ್ಗೆ ಗಮನ ಹರಿಸಿ ಎಂದು ಕಾಂಗ್ರೆಸ್ ಪಕ್ಷವುಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಅವರಲ್ಲಿ ಒತ್ತಾಯಿಸಿದೆ.

ಅಸ್ಸಾಂ ಸರ್ಕಾರ ಕಳೆದ ವರ್ಷ ಪ್ರಕಟಿಸಿದ ರಾಷ್ಟ್ರೀಯ ಪೌರತ್ವ ನೋಂದಣಿ ಕರಡು ಪಟ್ಟಿಯಲ್ಲಿ ಹೆಸರು ಇಲ್ಲ ಎಂಬ ಕಾರಣದಿಂದ ಇಲ್ಲಿಯವರೆಗೆ 44 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ನೇತಾರ ಅಪುರ್ಬ ಕುಮಾರ್ ಭಟ್ಟಾಚಾರ್ಯ ಹೇಳಿದ್ದಾರೆ.

ಈ ಬಗ್ಗೆ ಗಮನ ಹರಿಸಿದ ಸುರ್ಪ್ರೀಂ ಕೋರ್ಟ್ ಮತ್ತು ಸಿಜೆಐ ರಂಜನ್ ಗೊಗೊಯಿ ಅವರುಪೌರತ್ವ ನೋಂದಣಿ ಪ್ರಕ್ರಿಯೆಗಳ ಬಗ್ಗೆಮುತುವರ್ಜಿ ವಹಿಸುವಂತೆ ರಾಷ್ಟ್ರೀಯ ಪೌರತ್ವ ನೋಂದಣಿ ಕೋಆರ್ಡಿನೇಟರ್ ಪ್ರತೀಕ್ ಹಜೇಲಾ ಅವರಿಗೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.