ADVERTISEMENT

ಅತ್ಯಾಚಾರ ಪ್ರಕರಣ ಕುರಿತ ವಿಶ್ವಸಂಸ್ಥೆ ಅಧಿಕಾರಿಗಳ ಹೇಳಿಕೆಗೆ ಭಾರತ ಕಿಡಿ

ಏಜೆನ್ಸೀಸ್
Published 6 ಅಕ್ಟೋಬರ್ 2020, 7:52 IST
Last Updated 6 ಅಕ್ಟೋಬರ್ 2020, 7:52 IST
ಅನುರಾಗ್‌ ಶ್ರೀವಾಸ್ತವ
ಅನುರಾಗ್‌ ಶ್ರೀವಾಸ್ತವ    

ದೆಹಲಿ: ಮಹಿಳೆಯರ ಮೇಲಿನ ಇತ್ತೀಚಿನ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಅಧಿಕಾರಿಗಳು (ಸ್ಥಾನಿಕ ಸಂಯೋಜಕರು) ನೀಡಿದ್ದ ಹೇಳಿಕೆಯನ್ನು ಭಾರತ ಮಂಗಳವಾರ ಖಂಡಿಸಿದೆ. ‘ಅಧಿಕಾರಿಗಳ ಹೇಳಿಕೆಯು ಅನಗತ್ಯ’ ಎಂದು ಭಾರತ ಹೇಳಿದೆ.

‘ತನಿಖೆ ಇನ್ನೂ ಪ್ರಗತಿಯಲ್ಲಿದೆ. ಹೀಗಿರುವಾಗ, ಬಾಹ್ಯ ಏಜೆನ್ಸಿಗಳು ಯಾವುದೇ ಅನಗತ್ಯ ಟೀಕೆಗಳನ್ನು ಮಾಡದೇ ಇರುವುದು ಉತ್ತಮ,’ ಎಂದು ವಿದೇಶಾಂಗ ಇಲಾಖೆ ಹೇಳಿದೆ.

ವಿಶ್ವಸಂಸ್ಥೆಯ ಅಧಿಕಾರಿಗಳ ಹೇಳಿಕೆ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ವಿದೇಶಾಂಗ ಇಲಾಖೆ ವಕ್ತಾರ ಅನುರಾಗ್ ಶ್ರೀವಾಸ್ತವ, ‘ಮಹಿಳೆಯರ ಮೇಲಿನ ಇತ್ತೀಚಿನ ಕೆಲವು ಹಿಂಸಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆ ಸ್ಥಾನಿಕ ಸಂಯೋಜಕರು ಕೆಲವು ಅನಗತ್ಯ ಹೇಳಿಕೆಗಳನ್ನು ನೀಡಿದ್ದಾರೆ. ಈ ಪ್ರಕರಣಗಳನ್ನು ಸರ್ಕಾರಗಳು ಅತ್ಯಂತ ಗಂಭೀರವಾಗಿ ಪರಿಗಣಿಸಿವೆ ಎಂಬುದನ್ನು ಭಾರತದಲ್ಲಿರುವ ಸಂಯೋಜಕರು ತಿಳಿದಿರಬೇಕು’ ಎಂದು ಅವರು ಹೇಳಿದರು.

ADVERTISEMENT

‘ತನಿಖೆ ಇನ್ನೂ ನಡೆಯುತ್ತಿದೆ. ಹೀಗಿರುವಾಗ ಬಾಹ್ಯ ಏಜೆನ್ಸಿಗಳು ಅನಗತ್ಯ ಹೇಳಿಗಳನ್ನು ತಡೆಯುವುದೇ ಸೂಕ್ತ. ಸಂವಿಧಾನವು ಭಾರತದ ಎಲ್ಲಾ ನಾಗರಿಕರಿಗೆ ಸಮಾನತೆಯನ್ನು ಖಾತರಿಪಡಿಸುತ್ತದೆ. ಇಲ್ಲಿ ಪ್ರಜಾಪ್ರಭುತ್ವವಿದೆ. ಸಮಾಜದ ಎಲ್ಲರಿಗೂ ನ್ಯಾಯ ಒದಗಿಸಲಾಗುತ್ತದೆ,’ ಎಂದು ಅವರು ಹೇಳಿದರು.

ಏನು ಹೇಳಿದ್ದರು ವಿಶ್ವಸಂಸ್ಥೆ ಅಧಿಕಾರಿಗಳು?

‘ಮಹಿಳೆಯರು, ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಮಹಿಳೆಯರು ಲಿಂಗ ಆಧಾರಿತ ಹಿಂಸಾಚಾರದ ಅಪಾಯವನ್ನು ಎದುರಿಸುತ್ತಿದ್ದಾರೆ ಎಂಬುದಕ್ಕೆ ಹಾಥರಸ್‌ ಮತ್ತು ಬಲರಾಂಪುರದಲ್ಲಿ ನಡೆದ ಅತ್ಯಾಚಾರ, ಕೊಲೆ ಪ್ರಕರಣಗಳು ಸಾಕ್ಷಿ,’ ಎಂದು ಭಾರತದಲ್ಲಿನ ವಿಶ್ವಸಂಸ್ಥೆ ಸಂಯೋಜಕರು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.