ADVERTISEMENT

ವಿಮಾನಗಳಲ್ಲಿ ಆಹಾರ ಪೂರೈಕೆಗೆ ಅನುಮತಿ ನೀಡಿದ ನಾಗರಿಕ ವಿಮಾನಯಾನ ಸಚಿವಾಲಯ

ಪಿಟಿಐ
Published 28 ಆಗಸ್ಟ್ 2020, 9:04 IST
Last Updated 28 ಆಗಸ್ಟ್ 2020, 9:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶೀಯ ವಿಮಾನಗಳಲ್ಲಿ ಪ್ರಯಾಣಿಕರಿಗೆ ಪ್ಯಾಕ್ ಮಾಡಿದ ಊಟ, ತಿಂಡಿ, ಪಾನೀಯಗಳನ್ನು ಹಾಗೂ ಅಂತರರಾಷ್ಟ್ರೀಯ ವಿಮಾನಗಳಲ್ಲಿ ಬಿಸಿ ಊಟ ಮತ್ತು ಮಿತವಾಗಿ ಪಾನೀಯಗಳನ್ನು ಪೂರೈಸಲು ಸರ್ಕಾರ ತಿಳಿಸಿದೆ.

ಹಾಗೆಯೇ ಫೇಸ್‌ ಮಾಸ್ಕ್ ಧರಿಸಲು ನಿರಾಕರಿಸುವ ಪ್ರಯಾಣಿಕರನ್ನು ಪ್ರಯಾಣಿಕರ ಪಟ್ಟಿಯಲ್ಲಿ ಸೇರಿಸುವುದಿಲ್ಲ ಎಂದು ಡಿಜಿಸಿಎ ಹಿರಿಯ ಅಧಿಕಾರಿಯೊಬ್ಬರು ಎಚ್ಚರಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಕೊರೊನಾ- ಲಾಕ್‌ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ವಿಮಾನ ಸಂಚಾರ ಮೇ 25ರಿಂದ ಪುನರಾರಂಭವಾಗಿತ್ತು. ಆದರೆ, ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಆರಂಭದಲ್ಲಿ ದೇಶೀಯ ವಿಮಾನಗಳಲ್ಲಿ ಪ್ರಯಾಣಿಕರಿಗೆ ಪ್ಯಾಕ್ ಮಾಡಿದ ಆಹಾರ ನೀಡುವುದನ್ನು ಸ್ಥಗಿತ ಗೊಳಿಸಲಾಗಿತ್ತು. ಅಂತರರಾಷ್ಟ್ರೀಯ ವಿಮಾನ ಯಾನದಲ್ಲಿ ಮಾತ್ರ ಪ್ಯಾಕ್ ಮಾಡಿದ ಆಹಾರ ಮತ್ತು ಪಾನೀಯಗಳ ಪೂರೈಕೆಗೆ ಅನುಮತಿ ನೀಡಲಾಗಿತ್ತು.

ADVERTISEMENT

’ವಿಮಾನಯಾನದ ಅವಧಿಯನ್ನು ಅವಲಂಬಿಸಿ ದೇಶೀಯ ವಿಮಾನಗಳಲ್ಲಿ ಪ್ಯಾಕ್ ಮಾಡಿದ ತಿಂಡಿಗಳು, ಮತ್ತು ಪಾನೀಯಗಳನ್ನು ನೀಡಬಹುದು. ಅಂತರರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ ಬಿಸಿ ಆಹಾರ ಮತ್ತು ಮಿತ ಪಾನೀಯಗಳನ್ನು ನೀಡಬಹುದು’ ನಾಗರಿಕ ವಿಮಾನಯಾನ ಸಚಿವಾಲಯ ಗುರುವಾರ ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ.

’ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಯಾನಗಳಲ್ಲಿ ಆಹಾರ ಅಥವಾ ಪಾನೀಯಗಳನ್ನು ಪೂರೈಸುವಾಗ ಒಂದು ಬಾರಿ ಬಳಸಿ ಬಿಸಾಡಬಹುದಾದ ಟ್ರೇಗಳು, ಫಲಕಗಳು ಮತ್ತು ಕಟ್ಲರಿಗಳನ್ನು ಮಾತ್ರ ಬಳಸಬೇಕು’ ಎಂದು ಸಚಿವಾಲಯ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ’ಆಹಾರ ಪೂರೈಸುವ ವಿಮಾನ ಯಾನ ಸಂಸ್ಥೆಯ ಸಿಬ್ಬಂದಿ (ಕ್ರ್ಯೂಗಳು) ಪ್ರತಿ ಬಾರಿಹೊಸ ಗ್ಲೌಸ್‌ಗಳನ್ನು ಧರಿಸಬೇಕು’ ಎಂದು ತಿಳಿಸಲಾಗಿದೆ.

’ಪ್ರಯಾಣದ ಆರಂಭದಲ್ಲಿ ಪ್ರಯಾಣಿಕರಿಗೆ ಒಮ್ಮೆ ಬಳಸಿ ಬಿಸಾಡಬಹುದಾದ ಇಯರ್‌ಫೋನ್‌ಗಳು ಅಥವಾ ಸ್ವಚ್ಛಗೊಳಿಸಬಹುದಾದ ಹಾಗೂ ಸೋಂಕುರಹಿತ ಹೆಡ್‌ಫೋನ್‌ಗಳನ್ನು ಒದಗಿಸಬೇಕು. ಫೇಸ್‌ಮಾಸ್ಕ್‌ ಧರಿಸಲು ನಿರಾಕರಿಸುವ ಪ್ರಯಾಣಿಕರನ್ನು ’ನೋ ಫ್ಲೈಯಿಂಗ್ ಲಿಸ್ಟ್‌’ನಲ್ಲಿ ಸೇರಿಸಲಾಗುತ್ತದೆ’ ಎಂದು ಸಚಿವಾಲಯದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.