ADVERTISEMENT

ಸಿಸಿಟಿವಿ ನಂಬಿ ಅಮಾಯಕನ ಕೊಂದ ತೆಲಂಗಾಣ ಪೊಲೀಸರು: ವ್ಯಾಪಕ ಆಕ್ರೋಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಫೆಬ್ರುವರಿ 2023, 16:14 IST
Last Updated 22 ಫೆಬ್ರುವರಿ 2023, 16:14 IST
ಸಿಸಿಟಿವಿ
ಸಿಸಿಟಿವಿ    

ಹೈದರಾಬಾದ್: ಸಿಸಿಟಿವಿ ನಂಬಿ ತಪ್ಪಿಲ್ಲದವನನನ್ನು ಠಾಣೆಗೆ ಕರೆತಂದು ಹಿಗ್ಗಾಮುಗ್ಗ ಹಲ್ಲೆ ಮಾಡಿದ್ದಕ್ಕೆ ಹಲ್ಲೆಗೊಳಗಾದ ವ್ಯಕ್ತಿ ಮೃತಪಟ್ಟಿದ್ದರಿಂದ ಇದೀಗ ತೆಲಂಗಾಣ ಪೊಲೀಸರು ಪೇಚಿಗೆ ಸಿಲುಕಿರುವ ಘಟನೆ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ಫೆಬ್ರುವರಿ 17 ರಂದು ಎಂಡಿ ಖಾದರ್ (36) ಎಂಬ ಅಮಾಯಕ ಮೃತಪಟ್ಟಿದ್ದಾರೆ.

ಜನವರಿ 27 ರಂದು ಮೇದಕ್ ಟೌನ್ ಪೊಲೀಸ್ ಠಾಣೆಯಲ್ಲಿ ಸರಗಳ್ಳತನ ಪ್ರಕರಣ ದಾಖಲಾಗಿತ್ತು. ಸಿಸಿಟಿವಿ ಪರಿಶೀಲಿಸಿದ ಪೊಲೀಸರು ಜ.29ರಂದು ಎಂಡಿ ಖಾದರ್ ಅವರೇ ಆರೋಪಿ ಎಂದು ಠಾಣೆಗೆ ಕರೆ ತಂದು ಮನಸೋಇಚ್ಚೆ ಥಳಿಸಿದ್ದರು.

ADVERTISEMENT

ಕಡೆಗೆ ತಾವು ಕರೆತಂದಿದ್ದು ನಿಜವಾದ ಆರೋಪಿ ಅಲ್ಲ ಎಂದು ಖಚಿತಪಡಿಸಿಕೊಂಡ ಮೇಲೆ ಪೊಲೀಸರು ಖಾದರ್ ಅವರನ್ನು ಫೆಬ್ರುವರಿ 3ರಂದು ಬಿಡುಗಡೆ ಮಾಡಿದ್ದರು. ಅಲ್ಲದೇ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಮೇದಕ್ ಜಿಲ್ಲಾ ಆಸ್ಪತ್ರೆಗೆ ಸೇರಿಸಿದ್ದರು.

ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‌ನ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಫೆಬ್ರುವರಿ 17ರಂದು ಖಾದರ್ ಅವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು. ಈ ಕುರಿತು ಮೃತನ ಪತ್ನಿ ಸಿದ್ದೇಶ್ವರಿ ಅವರು ಇದೊಂದು ಲಾಕಪ್ ಡೆತ್. ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ಆಗಲಿ ಎಂದು ಆಗ್ರಹಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಮೂವರು ಕಾನ್‌ಸ್ಟೇಬಲ್‌ಗಳನ್ನು ಅಮಾನತು ಮಾಡಲಾಗಿದೆ. ಆದರೆ, ಖಾದರ್ ಸಾವಿನ ಬಗ್ಗೆ ಮಾನವ ಹಕ್ಕು ಸಂಘಟನೆಗಳು ಸೇರಿದಂತೆ ಸಾಮಾಜಿಕ ತಾಣಗಳಲ್ಲಿ ನಾಗರಿಕರು ತೆಲಂಗಾಣ ಪೊಲೀಸರ ವರ್ತನೆಗೆ ಛೀಮಾರಿ ಹಾಕುತ್ತಿದ್ದಾರೆ.

ಅಲ್ಲದೇ ಪೊಲೀಸರು ಬಳಸುವ ಫೇಸ್‌ ರೆಕಾಗ್ನೇಷನ್ ತಂತ್ರಜ್ಞಾನ ಎಷ್ಟು ನಂಬಲರ್ಹ? ಎಂದು ಪ್ರಶ್ನಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.