ADVERTISEMENT

ಮೆಡಿಕಲ್‌ ಸೀಟು ಖಾಲಿ ಉಳಿಯುವಂತಿಲ್ಲ: ಸುಪ್ರೀಂ ಕೋರ್ಟ್‌

ಪಿಟಿಐ
Published 3 ಜನವರಿ 2025, 15:38 IST
Last Updated 3 ಜನವರಿ 2025, 15:38 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ‘ವೈದ್ಯಕೀಯ ಶಿಕ್ಷಣ ಕೋರ್ಸ್‌ಗಳ ಸೀಟುಗಳು ಖಾಲಿ ಉಳಿಯಬಾರದು’ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಹೇಳಿದೆ. 

‘ಈ ಕುರಿತು ರಚನೆಯಾಗಿದ್ದ ಸಮಿತಿಯ ಶಿಫಾರಸುಗಳನ್ನು ಪರಿಗಣಿಸಲು ವಿವಿಧ ರಾಜ್ಯಗಳು ಹಾಗೂ ಭಾಗಿದಾರರ ಸಭೆ ಆಯೋಜಿಸಬೇಕು’ ಎಂದು ನ್ಯಾಯಮೂರ್ತಿಗಳಾದ ಬಿ.ಆರ್‌. ಗವಾಯಿ, ಕೆ.ವಿ.ವಿಶ್ವನಾಥನ್ ಅವರಿದ್ದ ಪೀಠವು ಕೇಂದ್ರ ಸರ್ಕಾರಕ್ಕೆ ಸೂಚಿಸಿತು. 

‘ಮೂರು ತಿಂಗಳ ಅವಧಿಯಲ್ಲಿ ಈ ಕುರಿತು ಸ್ಪಷ್ಟ ತೀರ್ಮಾನ ಕೈಗೊಳ್ಳಬೇಕು’ ಎಂದೂ ಸಲಹೆ ನೀಡಿರುವ ಪೀಠವು ಈ ಕುರಿತ ವಿಚಾರಣೆಯನ್ನು ಏಪ್ರಿಲ್‌ ತಿಂಗಳಿಗೆ ಮುಂದೂಡಿತು.

ADVERTISEMENT

ಸುಪ್ರೀಂ ಕೋರ್ಟ್‌ 2023ರ ಏಪ್ರಿಲ್‌ನಲ್ಲಿ ‘ವೈದ್ಯಕೀಯ ಕೋರ್ಸ್‌ಗಳಲ್ಲಿ ಸೂಪರ್‌ ಸ್ಪೆಷಾಲಿಟಿ ಸೀಟುಗಳು ಖಾಲಿ ಉಳಿಯುತ್ತಿವೆ’ ಎನ್ನುವ ವಿಷಯ ಕುರಿತು ವಿಚಾರಣೆ ಆರಂಭಿಸಿತ್ತು.

ಕೇಂದ್ರ ಸರ್ಕಾರ ಆ ಬಳಿಕ ಆರೋಗ್ಯ ಸಚಿವಾಲಯದ ಪ್ರಧಾನ ನಿರ್ದೇಶಕರ ಅಧ್ಯಕ್ಷತೆಯಲ್ಲಿ ವಿವಿಧ ರಾಜ್ಯಗಳು, ಖಾಸಗಿ ವೈದ್ಯಕೀಯ ಕಾಲೇಜುಗಳ ಪ್ರತಿನಿಧಿಗಳಿರುವ ಸಮಿತಿ ರಚಿಸಿತ್ತು.

‘ಈ ಸಮಿತಿಯು ಕೇಂದ್ರ ಸರ್ಕಾರಕ್ಕೆ ತನ್ನ ವರದಿಯನ್ನು ನೀಡಿದೆ. ಸಂಬಂಧಪಟ್ಟ ಪ್ರಮುಖರ ಜೊತೆಗೆ ಸಭೆ ನಡೆಸಿ ಸ್ಪಷ್ಟ ಪ್ರಸ್ತಾವ ಸಲ್ಲಿಸಬಹುದು’ ಎಂದು ಶುಕ್ರವಾರ ವಿಚಾರಣೆಯ ವೇಳೆ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲರು ಪೀಠದ ಗಮನಕ್ಕೆ ತಂದರು.

ಇದನ್ನು ಮಾನ್ಯ ಮಾಡಿದ ಪೀಠವು ‘ಸಭೆ ಏರ್ಪಡಿಸಬೇಕು’ ಎಂದು ಕೇಂದಕ್ಕೆ ಸೂಚಿಸಿತು.

‘ಮಹತ್ವದ ಸುಮಾರು 1,003 ಸೂಪರ್ ಸ್ಪೆಷಾಲಿಟಿ ಸೀಟುಗಳು ಖಾಲಿ ಉಳಿದಿವೆ ಎಂಬುದು ಕಳವಳಕಾರಿಯಾದ ಸ್ಥಿತಿ’ ಎಂದು ಸುಪ್ರೀಂ ಕೋರ್ಟ್‌ 2003ರ ಏಪ್ರಿಲ್‌ನಲ್ಲಿ ಹೇಳಿತ್ತು. ಭರ್ತಿ ಆಗದಿದ್ದರೆ ಇವು ನಿರುಪಯೋಗಿ ಆಗಲಿವೆ ಎಂದು ಆತಂಕ ವ್ಯಕ್ತಪಡಿಸಿತ್ತು.

‘ಒಂದೆಡೆ ಸೂಪರ್ ಸ್ಪೆಷಾಲಿಟಿ ವೈದ್ಯರ ಕೊರತೆಯನ್ನು ಎದುರಿಸುತ್ತಿದ್ದೇವೆ, ಇನ್ನೊಂದು ಕಡೆ ಅದಕ್ಕೆ ಸಂಬಂಧಿತ ಸೀಟುಗಳು ಖಾಲಿ ಉಳಿಯುತ್ತಿವೆ’ ಎಂದು ಪೀಠ ಅಭಿಪ್ರಾಯಪಟ್ಟಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.