ADVERTISEMENT

ಮೆಹಬೂಬಾ ಪಾಸ್‌ಪೋರ್ಟ್‌ ಅರ್ಜಿ ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ತಿರಸ್ಕೃತ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2021, 10:43 IST
Last Updated 29 ಮಾರ್ಚ್ 2021, 10:43 IST
ಮೆಹಬೂಬಾ ಮುಫ್ತಿ
ಮೆಹಬೂಬಾ ಮುಫ್ತಿ   

ಶ್ರೀನಗರ: ಪಿಡಿಪಿ ಅಧ್ಯಕ್ಷೆ, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರಿಗೆ ಪಾಸ್‌ಪೋರ್ಟ್‌ ನೀಡಲು ನಿರಾಕರಿಸಿದ್ದು, ಪಾಸ್‌ಪೋರ್ಟ್‌ ಕಾಯ್ದೆಯಡಿ ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

‘ಸ್ಥಳೀಯ ಪಾಸ್‌ಪೋರ್ಟ್‌ ಕಚೇರಿಯು ಸಿಐಡಿ ವರದಿ ಆಧರಿಸಿ ನನ್ನ ಪಾಸ್‌ಪೋರ್ಟ್‌ ನೀಡಲು ನಿರಾಕರಿಸಿದೆ. ಮಾಜಿ ಮುಖ್ಯಮಂತ್ರಿಯೊಬ್ಬರು ಪಾಸ್‌ಪೋರ್ಟ್‌ ಹೊಂದಿರುವುದು ಕೂಡಾ ದೇಶದ ಸಾರ್ವಭೌಮತೆಗೆ ಧಕ್ಕೆಯಾಗಲಿದೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ. ಪಾಸ್‌ಪೋರ್ಟ್ ನಿರಾಕರಣೆಗೆ ಸಂಬಂಧಿಸಿದ ಕಚೇರಿಯು ನೀಡಿರುವ ಪತ್ರವನ್ನೂ ಅವರೂ ಹಂಚಿಕೊಂಡಿದ್ದಾರೆ.

ಸಿಐಡಿ ವರದಿ ಉಲ್ಲೇಖಿಸಿರುವ ಕಚೇರಿಯು ಪಾಸ್‌ಪೋರ್ಟ್‌ ನೀಡಲು ಇದು ಸೂಕ್ತವಾದ ಪ್ರಕರಣವಲ್ಲ ಎಂದಿದ್ದು, ಅರ್ಜಿಯನ್ನು ತಿರಸ್ಕರಿಸಲು ಕಾಯ್ದೆಯ ಸೆಕ್ಷನ್‌ 6 (2) ಅನ್ನು ಉಲ್ಲೇಖಿಸಿದೆ. ಆದರೆ, ಈ ನಿರ್ಧಾರ ಪ್ರಶ್ನಿಸಿ ಮುಖ್ಯ ಕಚೇರಿ ಸಂಪರ್ಕಿಸಲು ಮಾಜಿ ಮುಖ್ಯಮಂತ್ರಿ ಸ್ವತಂತ್ರರಿದ್ದಾರೆ ಎಂದು ಹೇಳಿದೆ.

ADVERTISEMENT

ಮೆಹಬೂಬಾ ಅವರು ಜಮ್ಮು ಕಾಶ್ಮೀರದಲ್ಲಿ ಜೂನ್‌ 2018ರವರೆಗೂ ಬಿಜೆಪಿ ಜೊತೆಗೂಡಿದ ಮೈತ್ರಿ ಸರ್ಕಾರದ ನೇತೃತ್ವ ವಹಿಸಿದ್ದರು. ಪಾಸ್‌ಪೋರ್ಟ್‌ ಅವಧಿ ಮುಗಿದಿದ್ದ ಕಾರಣ ನವೀಕರಣಕ್ಕಾಗಿ ಕಳೆದ ಡಿಸೆಂಬರ್ ತಿಂಗಳಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.