ADVERTISEMENT

ಮುಫ್ತಿ ಗೃಹಬಂಧನದ ಆರೋಪ ನಿರಾಕರಿಸಿದ ಜಮ್ಮು ಪೊಲೀಸರು

ಪಿಟಿಐ
Published 5 ಅಕ್ಟೋಬರ್ 2022, 13:50 IST
Last Updated 5 ಅಕ್ಟೋಬರ್ 2022, 13:50 IST
   

ಶ್ರೀನಗರ:‘ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಾರ್ವಜನಿಕ ರ್‍ಯಾಲಿಯಲ್ಲಿ ಭಾಗವಹಿಸಲು ಕಾಶ್ಮೀರಕ್ಕೆ ಬಂದಿರುವುದರಿಂದ ನನ್ನನ್ನು ಗೃಹ ಬಂಧನದಲ್ಲಿರಿಸಲಾಗಿದೆ’ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ. ಈ ಸಂಬಂಧ ಮೆಹಬೂಬಾ ಹಾಗೂ ಜಮ್ಮು ಕಾಶ್ಮೀರ ಪೊಲೀಸರ ನಡುವೆ ಬುಧವಾರ ಟ್ವಿಟ್ಟರ್‌ ಸಮರ ನಡೆದಿದೆ.

‘ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಇಲ್ಲಿಂದ 54 ಕಿ.ಮೀ ದೂರದಲ್ಲಿರುವ ಉತ್ತರ ಕಾಶ್ಮೀರದ ಬಾರಾಮುಲ್ಲಾದಲ್ಲಿ ನಡೆಯಲಿರುವ ಸಾರ್ವಜನಿಕ ರ್‍ಯಾಲಿಯಲ್ಲಿ ಭಾಗವಹಿಸುತ್ತಿದ್ದಾರೆ. ಆದ್ದರಿಂದ ಇಲ್ಲಿಂದ 27 ಕಿ.ಮೀ ದೂರದಲ್ಲಿರುವ ಪಠಾಣ್‌ಗೆ ತೆರಳದಂತೆ ನನ್ನನ್ನು ತಡೆದಿದ್ದಾರೆ’ ಎಂದು ಅವರು ಟ್ವೀಟ್‌ ಮಾಡಿದ್ದರು.

‘ಅಮಿತ್‌ ಶಾ ಅವರು ಆರಾಮಾಗಿ ಕಾಶ್ಮೀರವನ್ನು ಸುತ್ತುತ್ತಿದ್ದಾರೆ. ಆದರೆ, ಪಕ್ಷದ ಕಾರ್ಯಕರ್ತನ ಮದುವೆಗೆ ಹೋಗದಂತೆ ನನ್ನನ್ನು ಗೃಹ ಬಂಧನದಲ್ಲಿ ಇಟ್ಟಿದ್ದಾರೆ. ರಾಜ್ಯದ ಒಬ್ಬ ಮಾಜಿ ಮುಖ್ಯಮಂತ್ರಿಯ ಮೂಲಭೂತ ಹಕ್ಕನ್ನೇ ಕಿತ್ತುಕೊಂಡಿದ್ದಾರೆ ಎಂದಾದರೆ, ಒಬ್ಬ ಸಾಮಾನ್ಯ ಪ್ರಜೆಯ ಸಂಕಷ್ಟ ಎಷ್ಟಿರಬಹುದು ಎಂದು ಅಂದಾಜು ಮಾಡುವುದೂ ಕಷ್ಟ’ ಎಂದು ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಅವರಿಗೆ ಟ್ಯಾಗ್‌ ಮಾಡಿ ಮುಫ್ತಿ ಅವರು ಟ್ವೀಟ್‌ ಮಾಡಿದರು. ತಮ್ಮ ಮನೆಯ ಗೇಟಿಗೆ ಬೀಗ ಹಾಕಿರುವ ಚಿತ್ರವನ್ನೂ ಮುಫ್ತಿ ಅವರು ಟ್ವೀಟ್‌ ಮಾಡಿದ್ದಾರೆ.

ADVERTISEMENT

ಮುಫ್ತಿ ಅವರು ಟ್ವೀಟ್‌ ಮಾಡಿದ ಸುಮಾರು 40 ನಿಮಿಷಗಳ ಬಳಿಕ ಶ್ರೀನಗರ ಪೊಲೀಸರು ಟ್ವೀಟ್‌ ಮಾಡಿ, ಮುಫ್ತಿ ಅವರ ಆರೋಪವನ್ನು ತಳ್ಳಿ ಹಾಕಿದ್ದಾರೆ. ‘ಪಠಾಣ್‌ಗೆ ತೆರಳದಂತೆ ಅವರನ್ನು ತಡೆದಿಲ್ಲ. ಎಲ್ಲಿಗೆ ಬೇಕಾದರೂ ಹೋಗಲು ಅವರಿಗೆ ಸ್ವಾತಂತ್ರ್ಯ ಇದೆ’ ಎಂದರು.

‘ಪಠಾಣ್‌ಗೆ ತೆರಳಲು ಅವರಿಗೆ ಯಾವುದೇ ನಿರ್ಬಂಧ ಹಾಕಿಲ್ಲ. ತಮ್ಮ ಮನೆಯ ಒಳಗಡೆಯಿಂದ ಗೇಟಿನ ಭಾಗದ ಚಿತ್ರವನ್ನು ಅವರು ಟ್ವೀಟ್‌ ಮಾಡಿದ್ದಾರೆ. ಅವರ ಮನೆ ಗೇಟಿಗೆ ಯಾರೂ ಬೀಗ ಹಾಕಿಲ್ಲ’ ಎಂದು ಟ್ವೀಟ್‌ ಮಾಡಿದ್ದಾರೆ. ಅಲ್ಲದೆ ಮುಫ್ತಿ ಅವರ ಮನೆಯ ಗೇಟ್‌ನ ಹೊರಭಾಗದಿಂದ ಬೀಗ ಹಾಕಿರದೇ ಇರುವ ಚಿತ್ರವನ್ನು ಪೊಲೀಸರು ಟ್ವೀಟ್‌ ಮಾಡಿದ್ದಾರೆ.

ಪೊಲೀಸರ ಟ್ವೀಟ್‌ಗಳಿಗೆ ತಕ್ಷಣವೇ ಪ್ರತಿಕ್ರಿಯಿಸಿದ ಮುಫ್ತಿ, ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿ ಬಾರಾಮುಲ್ಲಾ ಅವರು ಮಂಗಳವಾರ ರಾತ್ರಿ ಕರೆ ಮಾಡಿ, ಎಲ್ಲಿಗೂ ತೆರಳದಂತೆ ಹೇಳಿದ್ದಾರೆ. ತಾವು ಹೇಳಿರುವುದನ್ನೇ ಅವರು ಈಗ ನಿರಾಕರಿಸುತ್ತಿದ್ದಾರೆ. ಪೊಲೀಸರು ಸುಳ್ಳು ಹೇಳುತ್ತಿದ್ದಾರೆ ಎಂದರು.

ಪೊಲೀಸರು ತಾವಾಗಿಯೇ ನನ್ನ ಮನೆಯ ಒಳ ಭಾಗದಿಂದ ಗೇಟಿಗೆ ಬೀಗ ಹಾಕಿದ್ದಾರೆ. ಈಗ ಅವರೇ ಸುಳ್ಳು ಹೇಳುತ್ತಿದ್ದಾರೆ. ಕಾನೂನು ಜಾರಿ ಮಾಡುವ ಇಲಾಖೆಗೆ ತನ್ನ ತ‍ಪ್ಪನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿರುವುದು ಬೇಸರದ ಸಂಗತಿ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.