ADVERTISEMENT

ಶ್ರದ್ಧಾ ಹತ್ಯೆ: ಗುರುಗ್ರಾಮದಲ್ಲಿ ದೇಹದ ಕೆಲ ಭಾಗ ಪತ್ತೆ

ಮುಂಬೈ, ಹಿಮಾಚಲ ಪ್ರದೇಶಕ್ಕೆ ಪೊಲೀಸರ ತಂಡ

ಪಿಟಿಐ
Published 26 ನವೆಂಬರ್ 2022, 11:31 IST
Last Updated 26 ನವೆಂಬರ್ 2022, 11:31 IST
   

ನವದೆಹಲಿ, ಮುಂಬೈ: ಶ್ರದ್ಧಾ ಹತ್ಯೆಯ ಆರೋಪಿ ಆಫ್ತಾಬ್ ಅಮೀನ್ ಪೂನಾವಾಲಾಗೆ ಐದು ದಿನಗಳೊಳಗೆ ಮಂಪರು ಪರೀಕ್ಷೆ ನಡೆಸುವಂತೆ ದೆಹಲಿ ಕೋರ್ಟ್ ಪೊಲೀಸರಿಗೆ ನಿರ್ದೇಶನ ನೀಡಿದ್ದು, ಆಫ್ತಾಬ್ ಕೆಲಸ ಮಾಡುತ್ತಿದ್ದ ಗುರುಗ್ರಾಮದ ಕಚೇರಿಗೆ ಶುಕ್ರವಾರ ಪರಿಶೀಲನೆ ನಡೆಸಿದರು. ಕಚೇರಿ ಸಮೀಪದ ಪೊದೆಯಲ್ಲಿ ಪತ್ತೆಯಾದ ಮನುಷ್ಯನ ದೇಹದ ಕೆಲ ಭಾಗಗಳನ್ನು ಪೊಲೀಸರು ಸಂಗ್ರಹಿಸಿದರು.

ಈ ಭಾಗಗಳು ಶ್ರದ್ಧಾ ಅವರದ್ದೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅವುಗಳನ್ನು ವಿಧಿವಿಜ್ಞಾನ ಪ್ರಯೋಗಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮಂಪರು ಪರೀಕ್ಷೆಗೆ ಅನುಮತಿ ನೀಡಿರುವ ದೆಹಲಿ ಕೋರ್ಟ್, ಆರೋಪಿಗೆ ಯಾವುದೇ ರೀತಿಯ ಚಿತ್ರಹಿಂಸೆ ನೀಡಬಾರದು ಎಂದೂ ಪೊಲೀಸರಿಗೆ ನಿರ್ದೇಶನ ನೀಡಿದೆ.

ADVERTISEMENT

ಹಲ್ಲೆಯ ಚಾಟ್ ಬಹಿರಂಗ: ‘ಆಫ್ತಾಬ್ ನನ್ನ ಮೇಲೆ ಹಲ್ಲೆ ನಡೆಸಿದ್ದರಿಂದ ಹಾಸಿಗೆಯಿಂದ ಎದ್ದೇಳು ಸಾಧ್ಯವಾಗುತ್ತಿಲ್ಲ’ ಎಂದು ಶ್ರದ್ಧಾ ತಮ್ಮ ಸ್ನೇಹಿತರು ಮತ್ತು ಸಹೋದ್ಯೋಗಿಗಳೊಂದಿಗೆ ನಡೆಸಿದ್ದ ವಾಟ್ಸ್‌ಆ್ಯಪ್‌ನಹಳೆಯ ಸಂದೇಶಗಳು ಲಭ್ಯವಾಗಿವೆ.ಈ ಚಾಟ್‌ಗಳುಮುಂಬೈ ಬಳಿಯ ವಾಸಾಯಿಯಲ್ಲಿ ಆಫ್ತಾಬ್ ಜತೆಗೆ ವಾಸವಿದ್ದಾಗ ನಡೆದಿದ್ದ ಜಗಳದ ವಿಷಯವನ್ನು ಬಹಿರಂಗಪಡಿಸಿವೆ. 2020ರಲ್ಲಿ ಆಫ್ತಾಬ್‌ನಿಂದ ಹೊಡೆತ ತಿಂದಿದ್ದ ಶ್ರದ್ಧಾ ತನ್ನ ಮುಖದ ಮೇಲಿನ ಗಾಯದ ಚಿತ್ರಗಳನ್ನು ಸ್ನೇಹಿತರಿಗೆ ಕಳುಹಿಸಿದ್ದು, ಇವು ಶುಕ್ರವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ. ತಾವು ಆಕೆಯ ಜತೆಗಿರುವುದಾಗಿ ಸ್ನೇಹಿತರು ಧೈರ್ಯ ತುಂಬಿರುವ ಸಂದೇಶಗಳೂ ಅದರಲ್ಲಿವೆ.

‘ಆಫ್ತಾಬ್– ಶ್ರದ್ಧಾ ಮುಂಬೈ ತೊರೆದ ಬಳಿಕ ಜತೆಯಾಗಿ ಹಲವು ಸ್ಥಳಗಳಲ್ಲಿ ಸುತ್ತಾಡಿದ್ದಾರೆ. ಈ ಸಂದರ್ಭದಲ್ಲಿ ಹತ್ಯೆಯ ಪ್ರಚೋದನೆಗೆ ಏನಾದರೂ ಘಟನೆಗಳು ಸಂಭವಿಸಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪೊಲೀಸರ ತಂಡಗಳನ್ನು ಮಹಾರಾಷ್ಟ್ರ, ಹರಿಯಾಣ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ ಹಲವು ಸ್ಥಳಗಳಿಗೆ ಕಳುಹಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಡಿಎನ್ಎ ಪರೀಕ್ಷೆಗಾಗಿ ತಂದೆಯ ರಕ್ತದ ಮಾದರಿ ಸಂಗ್ರಹ
ನವದೆಹಲಿ
: ಪತ್ತೆಯಾಗಿರುವ ದೇಹದ ಭಾಗಗಳು ಶ್ರದ್ಧಾ ಅವರದ್ದೇ ಎಂಬುದನ್ನು ಗುರುತಿಸುವ ಸಲುವಾಗಿ ಡಿಎನ್‌ಎ ಪರೀಕ್ಷೆ ನಡೆಸಲು ಆಕೆಯ ತಂದೆ ಮತ್ತು ಸಹೋದರನ ರಕ್ತದ ಮಾದರಿಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.