ADVERTISEMENT

‘ಮೆಹ್ತಾ ರಾಜೀನಾಮೆಗೆ ರಾಜಕೀಯ ಒತ್ತಡ ಕಾರಣ’

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2021, 20:26 IST
Last Updated 19 ಮಾರ್ಚ್ 2021, 20:26 IST
ಪ್ರತಾಪ್‌ ಭಾನುಮೆಹ್ತಾ
ಪ್ರತಾಪ್‌ ಭಾನುಮೆಹ್ತಾ   

ನವದೆಹಲಿ: ಸರ್ಕಾರ ನೀತಿಗಳ ವಿಮರ್ಶಕರಾಗಿದ್ದ ಕಾರಣಕ್ಕೆ ಪ್ರಾಧ್ಯಾಪಕ, ರಾಜಕೀಯ ನಿರೂಪಕ ಪ್ರತಾಪ್‌ ಭಾನುಮೆಹ್ತಾ ಅವರ ರಾಜೀನಾಮೆ ಪಡೆಯಲಾಗಿದೆ ಎಂದು ಹರಿಯಾಣದ ಸೋನಿಪತ್‌ನ ಅಶೋಕ ವಿಶ್ವವಿದ್ಯಾಲಯದ ಬೋಧಕ ವೃಂದ ದೂರಿದೆ.

ಮೆಹ್ತಾ ಅವರನ್ನು ತೆಗೆಯಲು ಅಥವಾ ಅವರಿಂದ ರಾಜೀನಾಮೆ ಪಡೆಯಲು ಮತ್ತು ಸ್ವೀಕರಿಸಲು ವಿಶ್ವವಿದ್ಯಾಲಯ ಒತ್ತಡಕ್ಕೆ ಸಿಲುಕಿದಂತಿದೆ ಎಂದು ಅವರು ಆರೋಪಿಸಿದ್ದಾರೆ.

ವಿಶ್ವವಿದ್ಯಾಲದಯ ಕುಲಪತಿ ಮಲಬಿಕಾ ಸರ್ಕಾರ್‌ ಅವರು ಗುರುವಾರ ಸಂಜೆ ನಡೆಸಿದ ವರ್ಚುವಲ್‌ ಸಭೆಯಲ್ಲಿ, ‘ಮೆಹ್ತಾ ಅವರು ರಾಜೀನಾಮೆ ಹಿಂದಕ್ಕೆ ಪಡೆಯಲು ಸಿದ್ಧರಿಲ್ಲ’ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ADVERTISEMENT

ಪ್ರಾಧ್ಯಾಪಕರಾದ ಮೆಹ್ತಾ ಮತ್ತು ಅರವಿಂದ್‌ ಸುಬ್ರಹ್ಮಣಿಯಂ ರಾಜೀನಾಮೆ ನೀಡಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರಂ, ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಇಬ್ಬರು ಪ್ರಸಿದ್ಧ ಅರ್ಥಶಾಸ್ತ್ರಜ್ಞರು ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದರೆ ಈ ದೇಶದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯ ಎಷ್ಟಿದೆ ಎಂಬುದು ಗೊತ್ತಾಗುತ್ತದೆ. ದೇಶದಾದ್ಯಂತ ಏಕರೂಪವನ್ನು ಹೇರುವ ಪ್ರಯತ್ನ ನಡೆಯುತ್ತಿದ್ದು, ದೇಶದ ಜನರು ಇದನ್ನು ತೀವ್ರವಾಗಿ ವಿರೋಧಿಸಬೇಕು’ ಎಂದು ಹೇಳಿದ್ದಾರೆ.

‘ಬಿಜೆಪಿ ಚಿಂತನೆ‘ ಅಥವಾ ‘ಮೋದಿ ಚಿಂತನೆ’ಯು ದೇಶವನ್ನು ಹಾಳು ಮಾಡುತ್ತಿದೆ. ಅಲ್ಲದೆ ಅದು ದೇಶವನ್ನು ನಿರಂಕುಶ ಆಡಳಿತದತ್ತ ಒಯ್ಯುತ್ತಿದೆ ಎಂದು ಅವರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.