ಮೆಹುಲ್ ಚೋಕ್ಸಿ
ಚಿತ್ರ: ಎಕ್ಸ್
ಮುಂಬೈ: ಕೆನರಾ ಬ್ಯಾಂಕ್ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟದಿಂದ ಪಡೆದ ₹55 ಕೋಟಿ ಸಾಲವನ್ನು ಹಿಂದಿರುಗಿಸದೆ ವಂಚಿಸಿದ ಪ್ರಕರಣದಲ್ಲಿ ಉದ್ಯಮಿ ಮೆಹುಲ್ ಚೋಕ್ಸಿ ವಿರುದ್ಧ ಇಲ್ಲಿನ ನ್ಯಾಯಾಲಯವೊಂದು ಜಾಮೀನು ರಹಿತ ವಾರಂಟ್ ಹೊರಡಿಸಿದೆ.
ಬಹುಕೋಟಿ ಮೊತ್ತದ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಚೋಕ್ಸಿಯನ್ನು ಏಪ್ರಿಲ್ 12ರಂದು ಬೆಲ್ಜಿಯಂನಲ್ಲಿ ಬಂಧಿಸಲಾಗಿದೆ.
ಬಂಧನ ರಹಿತ ವಾರಂಟ್ ಹೊರಡಿಸಿರುವ ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ಆರ್.ಬಿ. ಠಾಕೂರ್ ಅವರು ವಿಚಾರಣೆಯನ್ನು ಜೂನ್ 2ಕ್ಕೆ ಮುಂದೂಡಿದ್ದಾರೆ.
ಬೆಜೆಲ್ ಜುವೆಲ್ಲರಿ ಎಂಬ ಕಂಪನಿಗೆ ಕೆನರಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರ ಕ್ರಮವಾಗಿ ₹30 ಕೋಟಿ ಹಾಗೂ ₹25 ಕೋಟಿ ಸಾಲವನ್ನು ಕಾರ್ಯಾಚರಣೆ ಬಂಡವಾಳವಾಗಿ ಒದಗಿಸಿದ್ದವು. ಆದರೆ ಕಂಪನಿಯು ಈ ಮೊತ್ತವನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಂಡಿತು ಎಂದು ಸಿಬಿಐ ಆರೋಪಿಸಿದೆ.
ಕಂಪನಿಯು ಸಾಲವನ್ನು ಮರಳಿಸಲೂ ಇಲ್ಲ. ಇದರಿಂದಾಗಿ ಬ್ಯಾಂಕ್‌ಗಳಿಗೆ ಒಟ್ಟು ₹55.27 ಕೋಟಿ ನಷ್ಟ ಆಗಿದೆ ಎಂದು ಸಿಬಿಐ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.