ADVERTISEMENT

ಮೇಕೆದಾಟು | ಕಾವೇರಿ ಪ್ರಾಧಿಕಾರಕ್ಕಿಲ್ಲ ಅಧಿಕಾರ: ತಮಿಳುನಾಡು

ಸುಪ್ರೀಂ ಕೋರ್ಟ್‌ಗೆ ತಮಿಳುನಾಡು ಪ್ರಮಾಣಪತ್ರ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2022, 21:59 IST
Last Updated 22 ನವೆಂಬರ್ 2022, 21:59 IST
ಮೇಕೆದಾಟು
ಮೇಕೆದಾಟು   

ನವದೆಹಲಿ: ‘ಕಾವೇರಿ ಜಲ ವಿವಾದನ್ಯಾಯಾಧಿಕರಣವು2007ರ ಫೆಬ್ರುವರಿ 2ರಂದು ನೀಡಿರುವ ಅಂತಿಮ ಆದೇಶವನ್ನು ಅನುಷ್ಠಾನ ಮಾಡಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವನ್ನು (ಸಿಡಬ್ಲ್ಯುಎಂಎ) ರಚಿಸಲಾಗಿದೆ. ಮೇಕೆದಾಟು ಸಮತೋಲನ ಜಲಾಶಯ ಸೇರಿದಂತೆ ಹೊಸ ಯೋಜನೆಗಳ ಬಗ್ಗೆ ಚರ್ಚೆ ನಡೆಸುವ ಅಧಿಕಾರ ಈ ಪ್ರಾಧಿಕಾರಕ್ಕೆ ಇಲ್ಲ. ಒಂದು ವೇಳೆ ಚರ್ಚೆ ನಡೆಸಿದರೆ ನ್ಯಾಯಾಂಗ ನಿಂದನೆ
ಯಾಗುತ್ತದೆ’ ಎಂದುತಮಿಳುನಾಡು ಸರ್ಕಾರ ಹೇಳಿದೆ.

‘ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಅವಕಾಶ ನೀಡಬಾರದು ಹಾಗೂ ಈ ಯೋಜನೆಯ ಸಮಗ್ರ ಯೋಜನಾ ವರದಿಯ ಬಗ್ಗೆ ಪ್ರಾಧಿಕಾರದಲ್ಲಿ ಚರ್ಚಿಸಬಾರದು. ಈ ಬಗ್ಗೆ ನಿರ್ದೇಶನ ನೀಡಬೇಕು’ ಎಂದು ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಪ್ರಾಧಿಕಾರದ ಅಧಿಕಾರ ವ್ಯಾಪ್ತಿಯ ಬಗ್ಗೆ ಸಾಲಿಸಿಟರ್ ಜನರಲ್‌ ತುಷಾರ್ ಮೆಹ್ತಾ ಅವರಿಂದ ಅಭಿಪ್ರಾಯ ಕೋರಲಾಗಿತ್ತು.ಜುಲೈ 26ರಂದು ಪ್ರಾಧಿಕಾರಕ್ಕೆ ಅಭಿಪ್ರಾಯ ನೀಡಿದ್ದ ಸಾಲಿಸಿಟರ್ ಜನರಲ್‌,‘ಕಾವೇರಿ ಜಲ ವಿವಾದ
ನ್ಯಾಯಾಧಿಕರಣದ ಮಾರ್ಪಾಡಾಗಿರುವ ಅಂತಿಮ ತೀರ್ಪಿನ ಪ್ರಕಾರ, ಪ್ರಾಧಿಕಾರಕ್ಕೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇದೆ’ ಎಂದು ತಿಳಿಸಿದ್ದರು. ಈ ಅಭಿಪ್ರಾಯದ ಆಧಾರದಲ್ಲಿ ಪ್ರಾಧಿಕಾರವು ಸೆಪ್ಟೆಂಬರ್‌ 7ರಂದು ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿತ್ತು. ಇದಕ್ಕೆ ಪ್ರತಿಯಾಗಿ ತಮಿಳುನಾಡು ಸರ್ಕಾರವು 155 ಪುಟಗಳ ಪ್ರಮಾಣಪತ್ರವನ್ನು ಸುಪ್ರೀಂ ಕೋರ್ಟ್‌ಗೆ ಮಂಗಳವಾರ ಸಲ್ಲಿಸಿದೆ.

ಪ್ರಮಾಣಪತ್ರದಲ್ಲಿ ಏನಿದೆ: ’ಕಾವೇರಿ ಕಣಿವೆಯಲ್ಲಿ ಸೀಮಿತ ಪ್ರಮಾಣದ ನೀರು ಲಭ್ಯ ಇರುವ ಕಾರಣಕ್ಕೆ ತಮಿಳುನಾಡು, ಕರ್ನಾಟಕ ರಾಜ್ಯಗಳ ಕೆಲವು ಯೋಜನೆಗಳಿಗೆ ನ್ಯಾಯಾಧಿಕರಣವು ಒಪ್ಪಿಗೆ ನೀಡಿರಲಿಲ್ಲ. ಈಗಿರುವ ಯೋಜನೆಗಳು, ಅನುಷ್ಠಾನ ಹಂತ ದಲ್ಲಿರುವ ಯೋಜನೆಗಳು ಹಾಗೂ ಪ್ರಸ್ತಾವಿತ ಯೋಜನೆಗಳನ್ನಷ್ಟೇ ಕೈಗೆತ್ತಿ ಕೊಳ್ಳಬಹುದು ಎಂದು ನಿರ್ದೇಶನ ನೀಡಿತ್ತು. ಇದರಲ್ಲಿ ಮೇಕೆದಾಟು ಯೋಜನೆಯ ಉಲ್ಲೇಖವೇ ಇರಲಿಲ್ಲ. ಆದರೆ, ಮೇಕೆದಾಟು ಸಮತೋಲನ ಜಲಾಶಯದಲ್ಲಿ 67.16 ಟಿಎಂಸಿ ಅಡಿಗಳಷ್ಟು ನೀರನ್ನು ಸಂಗ್ರಹಿಸಲಾಗುತ್ತದೆ ಎಂದು ಕರ್ನಾಟಕ ಸರ್ಕಾರದ ಸಮಗ್ರ ಯೋಜನಾ ವರದಿಯಲ್ಲಿದೆ. ಇದು ನ್ಯಾಯಾಧಿಕರಣದ ಅಂತಿಮ ಆದೇಶದ ಉಲ್ಲಂಘನೆ ಆಗುತ್ತದೆ’ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.

ADVERTISEMENT

‘ಕೇಂದ್ರ ಸರ್ಕಾರವು ಪ್ರಾಧಿಕಾರವನ್ನು 2018ರ ಜೂನ್‌ 1ರಂದು ರಚಿಸಿತು. ಪ್ರಾಧಿಕಾರವು ಇಲ್ಲಿಯವರೆಗೆ 17 ಸಭೆಗಳನ್ನು ನಡೆಸಿದೆ. ಕಾವೇರಿ ನೀರು ನಿಯಂತ್ರಣ ಸಮಿತಿಯ (ಸಿಡಬ್ಲ್ಯುಆರ್‌ಸಿ) 70 ಸಭೆಗಳು ನಡೆದಿವೆ. ಕರ್ನಾಟಕ ಸರ್ಕಾರ ಕೈಗೆತ್ತಿಕೊಳ್ಳುತ್ತಿರುವ ಏತ ನೀರಾವರಿ ಹಾಗೂ ಸಣ್ಣ ನೀರಾವರಿ ಯೋಜನೆಗಳು, ಅಣೆಕಟ್ಟೆ ನಿರ್ಮಾಣಗಳ ಬಗ್ಗೆ ನಿಗಾ ವಹಿಸುವಂತೆ ತಮಿಳುನಾಡು ಸರ್ಕಾರವು ಪ್ರಾಧಿಕಾರದ ಮೊದಲ ಸಭೆಯಲ್ಲೇ (2018ರ ಜುಲೈ 2) ಮನವಿ ಮಾಡಿತ್ತು. ಆದರೆ, ಕಾವೇರಿ ಕಣಿವೆಯಲ್ಲಿ 14 ಏತ ನೀರಾವರಿ ಯೋಜನೆಗಳು ಇವೆ ಎಂದು ಕರ್ನಾಟಕ ಸರ್ಕಾರವೇ ಹೇಳಿಕೊಂಡಿದೆ. ಏತ ನೀರಾವರಿ ಯೋಜನೆಗಳ ಮೂಲಕ 17.64 ಟಿಎಂಸಿ ಅಡಿ ನೀರನ್ನು ಬಳಸಿಕೊಂಡು 1.78 ಲಕ್ಷ ಎಕರೆಗೆ ನೀರುಣಿಸಲು ಕರ್ನಾಟಕ ಸರ್ಕಾರ ಸಿದ್ಧತೆ ನಡೆಸಿದೆ. ಇದಕ್ಕೂ ಸಹ ನ್ಯಾಯಾಧಿಕರಣ ಒಪ್ಪಿಗೆ ನೀಡಿರಲಿಲ್ಲ. ಆದರೆ, ಇಂತಹ ಯೋಜನೆಗಳ ವಿರುದ್ಧ ನಾಲ್ಕೂವರೆ ವರ್ಷಗಳಲ್ಲಿಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ಪ್ರಾಧಿಕಾರ ಯಾವುದೇ ಕ್ರಮ ಕ್ರಮ ಕೈಗೊಂಡಿಲ್ಲ’ ಎಂದು ತಮಿಳುನಾಡು ಸರ್ಕಾರ ದೂರಿದೆ.

ತಮಿಳುನಾಡಿನಿಂದ 3 ಪತ್ರ: ‘ಕಾವೇರಿ ಪ್ರಾಧಿಕಾರದ ಸಭೆಯ ಕಾರ್ಯಸೂಚಿಯಲ್ಲಿ ಮೇಕೆದಾಟು ವಿಷಯವನ್ನು ಸೇರ್ಪಡೆ ಮಾಡಬಾರದು ಎಂದು ಒತ್ತಾಯಿಸಿ ತಮಿಳುನಾಡಿನ ಜಲಸಂಪ ನ್ಮೂಲ ಸಚಿವರು ಕೇಂದ್ರ ಜಲಶಕ್ತಿ ಸಚಿವರಿಗೆ ಅಕ್ಟೋಬರ್‌ 29ರಂದು ಪತ್ರ ಬರೆದಿದ್ದಾರೆ. ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ನವೆಂಬರ್ 2ರಂದು ಜಲಶಕ್ತಿ ಸಚಿವಾಲಯದ ಕಾರ್ಯದರ್ಶಿಗೆ, ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಪ್ರಾಧಿಕಾರದ ಅಧ್ಯಕ್ಷರಿಗೆ ನವೆಂಬರ್ 2ರಂದು ಪತ್ರ ಬರೆದು ಗಮನ ಸೆಳೆದಿದ್ದಾರೆ. ಸುಪ್ರೀಂ ಕೋರ್ಟ್‌ನ ತೀರ್ಪು ಬರುವ ವರೆಗೆ ಪ್ರಾಧಿಕಾರವು ಯಾವುದೇ ಆತುರದ ತೀರ್ಮಾನ ಕೈಗೊಳ್ಳಬಾರದು’ ಎಂದೂ ಹೇಳಿದೆ.

ಪ್ರಾಧಿಕಾರದ ಸಭೆಯಲ್ಲಿ ಆಗಿದ್ದೇನು?

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ 17ನೇ ಸಭೆ (ಸಿಡಬ್ಲ್ಯುಎಂಎ) ಅಕ್ಟೋಬರ್‌ 14ರಂದು ನಡೆದಿದೆ. ಈ ವೇಳೆ, ಕರ್ನಾಟಕ ರಾಜ್ಯದ ಪ್ರತಿನಿಧಿ, ‘ಕರ್ನಾಟಕ ಸರ್ಕಾರ ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಲು ಯೋಜನೆ ರೂಪಿಸಿದೆ. ಪ್ರಾಧಿಕಾರಕ್ಕೆ ಕರ್ನಾಟಕ ಸರ್ಕಾರವುಸಮಗ್ರ ಯೋಜನಾ ವರದಿಯನ್ನು (ಡಿಪಿಆರ್‌) ಸಲ್ಲಿಸಿದೆ.

ಸಭೆಯ ಕಾರ್ಯಸೂಚಿಯಲ್ಲಿ ಮೇಕೆದಾಟು ವಿಚಾರ ಹಲವು ಸಲ ಸೇರ್ಪಡೆಯಾಗಿದೆ. ಬಳಿಕ ಅದನ್ನು ಕೈಬಿಡಲಾಗಿದೆ. ಆದರೆ, ಈ ವರೆಗೆ ಪ್ರಾಧಿಕಾರದ ಸಭೆಯಲ್ಲಿ ಚರ್ಚೆ ಆಗಿಲ್ಲ. 18ನೇ ಸಭೆಯ ಕಾರ್ಯಸೂಚಿಯಲ್ಲಿ ಮೇಕೆದಾಟು ವಿಷಯವನ್ನು ಸೇರ್ಪಡೆ ಮಾಡಬೇಕು’ ಎಂದು ಮನವಿ ಮಾಡಿದ್ದರು. ಜಲಶಕ್ತಿ ಸಚಿವಾಲಯದ ಜಂಟಿ ಕಾರ್ಯದರ್ಶಿ, ‘ಮೇಕೆದಾಟು ಯೋಜನೆ ಕುರಿತು ಪ್ರಾಧಿಕಾರ ಅಂತಿಮ ಅಭಿಪ್ರಾಯ ನೀಡುವ ವೇಳಾಪಟ್ಟಿಯನ್ನು ಕೂಡ ಸಿಡಬ್ಲ್ಯುಎಂಎ ನಿರ್ಧರಿಸಬೇಕು’ ಎಂದು ಅಭಿಪ್ರಾಯಪಟ್ಟಿದ್ದರು. ಬಳಿಕ, ಪ್ರಾಧಿಕಾರದ 18ನೇ ಸಭೆಯ ಕಾರ್ಯಸೂಚಿಯಲ್ಲಿ ಮೇಕೆದಾಟು ವಿಷಯವನ್ನು ಸೇರ್ಪಡೆ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಇದು ಸಹ ತಮಿಳುನಾಡು ಆಕ್ಷೇಪಕ್ಕೆ ಕಾರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.