ADVERTISEMENT

ಮೇಕೆದಾಟು: ತಮಿಳುನಾಡು ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 10 ಜುಲೈ 2019, 18:32 IST
Last Updated 10 ಜುಲೈ 2019, 18:32 IST

ಚೆನ್ನೈ: ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಲುದ್ದೇಶಿಸಿರುವ ಕರ್ನಾಟಕದ ಪ್ರಸ್ತಾವ ಕುರಿತು ಚರ್ಚಿಸುವ ಕೇಂದ್ರ ಸಮಿತಿಯ ನಿರ್ಧಾರಕ್ಕೆ ತಮಿಳುನಾಡು ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ನ್ಯಾಯಾಧಿಕರಣ ಮತ್ತು ಸುಪ್ರೀಂ ಕೋರ್ಟ್‌ನ ಅಂತಿಮ ತೀರ್ಪಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದುಹೇಳಿದೆ.

ಪರಿಸರ, ಅರಣ್ಯ ಸಚಿವಾಲಯದ ನದಿ ಕಣಿವೆ ಮತ್ತು ಜಲ ವಿದ್ಯುತ್‌ ಯೋಜನೆಗಳ ತಜ್ಞರ ಮೌಲ್ಯಮಾಪನ ಸಮಿತಿಯ ಸಭೆ ಜುಲೈ 19 ರಂದು ನಡೆಯಲಿದ್ದು, ಇದಕ್ಕೂ ಮುನ್ನವೇ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿದೆ.

ಮೇಕೆದಾಟು ಜಲಾಶಯ ಮತ್ತು ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿ ಸಭೆಯ ನಡಾವಳಿಯಲ್ಲಿ ಕರ್ನಾಟಕದ ಹೊಸ ಟಿಪ್ಪಣಿಗಳನ್ನು ಸೇರ್ಪಡೆ ಮಾಡುವುದಕ್ಕೆ ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ವಿರೋಧ ವ್ಯಕ್ತಪಡಿಸಿದ್ದಾರೆ.

ADVERTISEMENT

ಈ ಕುರಿತು ಪ್ರಧಾನಿ ಮೋದಿ ಅವರಿಗೆ ಈಗಾಗಲೇ ಪತ್ರ ಬರೆದಿರುವುದಾಗಿ,ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಮತ್ತು ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಬರೆದ ಪತ್ರಗಳಲ್ಲಿ ಪಳನಿಸ್ವಾಮಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.