ADVERTISEMENT

ಆತ್ಮ ನಿರ್ಭರ್ ಭಾರತಕ್ಕೆ 211 ಗಾಯಕರ ಸಂದೇಶ: ವಿಡಿಯೊ ಹಂಚಿಕೊಂಡ ಪ್ರಧಾನಿ ಮೋದಿ

ಏಜೆನ್ಸೀಸ್
Published 18 ಮೇ 2020, 7:31 IST
Last Updated 18 ಮೇ 2020, 7:31 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ದೇಶದಲ್ಲಿಕೊರೊನಾ ವೈರಸ್ ಸೋಂಕು ಹೆಚ್ಚುತ್ತಲೇ ಇದೆ. ಈ ವೇಳೆ 200ಕ್ಕೂ ಹೆಚ್ಚು ಗಾಯಕರು ಹಾಡಿರುವ ಆತ್ಮ ನಿರ್ಭರ್ ಭಾರತ ಪರಿಕಲ್ಪನೆಯಿಂದಸ್ಫೂರ್ತಿಗೊಂಡ 'ಜಯತು ಜಯತು ಭಾರತಂ - ವಸುದೇವ್ ಕುಟುಂಬಕಂ' ಎಂಬ ಹೊಸ ಹಾಡಿನ ವಿಡಿಯೊವನ್ನು ಪ್ರಧಾನಿ ನರೇಂದ್ರ ಮೋದಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಈ ಹಾಡು ಎಲ್ಲರನ್ನು ರೋಮಾಂಚನಗೊಳಿಸುತ್ತದೆ ಮತ್ತು ಪ್ರೇರೇಪಿಸುತ್ತದೆ. ಇದು 'ಆತ್ಮ ನಿರ್ಭರ್' (ಸ್ವಾವಲಂಬಿ) ಭಾರತಕ್ಕೆ ಒಂದು ಸುಮಧುರ ಸಂದೇಶವನ್ನು ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡುವ ಮೂಲಕ ಗಾಯಕಿ ಲತಾ ಮಂಗೇಶ್ಕರ್ ಅವರು ಪೋಸ್ಟ್ ಮಾಡಿದ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

211 ಭಾರತೀಯ ಗಾಯಕರ ಹಕ್ಕುಗಳ ಸಂಘ (ಇಸ್ರಾ) ಸದಸ್ಯರು ಒಟ್ಟಿಗೆ ಸೇರಿ ಆತ್ಮ ನಿರ್ಭರ್ ಭಾರತದ ಸ್ಫೂರ್ತಿಗೆ ಸುಮಧುರ ಗೀತೆಯ ಮೂಲಕ ವಂದನೆಗಳನ್ನು ಸಲ್ಲಿಸಿರುವ ಅತಿದೊಡ್ಡ ಗೀತೆ ವೇದಿಕೆ ಎಂದು ವಿವರಿಸಲಾಗಿದೆ.

ADVERTISEMENT

ಪ್ರಮುಖ ಗಾಯಕರಾದ ಆಶಾ ಭೋನ್ಸ್ಲೆ, ಸೋನು ನಿಗಮ್, ಶಂಕರ್ ಮಹದೇವನ್, ಶಾನ್, ಉಷಾ ಉತುಪ್, ಪ್ರಸೂನ್ ಜೋಶಿ, ವಸುಂದರ ದಾಸ್, ಚಿತ್ರಾ, ಎಸ್‌ಪಿ ಬಾಲಸುಬ್ರಹ್ಮಣ್ಯಂ, ಸೋನು ನಿಗಂ, ಲತಾ ಮಂಗೇಶ್ವರ್ ಸೇರಿದಂತೆ ಕನ್ನಡದ ಗಾಯಕರಾದ ವಿಜಯ್ ಪ್ರಕಾಶ್, ಬಿ ಆರ್ ಛಾಯಾ, ಸಂಗೀತಾ ಕಟ್ಟಿ, ಶಮಿತಾ ಮಲ್ನಾಡ್ ಸೇರಿ ಇತರರು ಗೀತೆಯನ್ನು ಹಾಡಿದ್ದಾರೆ. ದೇಶದಾದ್ಯಂತ ಲಾಕ್‌ಡೌನ್ ಇರುವುದರಿಂದಾಗಿ ತಮ್ಮ ತಮ್ಮ ಮನೆಗಳಿಂದಲೇ ಹಾಡಿನಭಾಗಗಳನ್ನು ರೆಕಾರ್ಡ್ ಮಾಡಿದ್ದಾರೆ. ಈ ಹಾಡನ್ನು ಪ್ರಸೂನ್ ಜೋಶಿ ಬರೆದಿದ್ದು, ಶಂಕರ್ ಮಹಾದೇವನ್ ಸಂಗೀತ ಸಂಯೋಜಿಸಿದ್ದಾರೆ.

ಇನ್ನು ಲತಾ ಮಂಗೇಶ್ಕರ್ ಅವರು ಟ್ವಿಟರ್‌ನಲ್ಲಿ ವಿಡಿಯೊ ಹಂಚಿಕೊಂಡಿದ್ದು, ಭಾರತದ 'ಆತ್ಮ ನಿರ್ಭರ್' ಭಾರತದ ಸ್ಫೂರ್ತಿಯಿಂದ ಪ್ರೇರೇಪಿತರಾಗಿ ನಮ್ಮ ಇಸ್ರಾದ ಪ್ರತಿಭಾನ್ವಿತ ಗಾಯಕರು ಒಗ್ಗೂಡಿ ಈ ಹಾಡನ್ನು ರಚಿಸಿದ್ದಾರೆ. ಈ ಹಾಡನ್ನು ಭಾರತದ ಜನರಿಗೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಮರ್ಪಿಸಲಾಗಿದೆ ಎಂದು ಹೇಳಿದ್ದಾರೆ.

ಈ ವಿಡಿಯೊದಲ್ಲಿ ಆರೋಗ್ಯ ಕಾರ್ಯಕರ್ತರಾದ ಕೋವಿಡ್-19 ಯೋಧರ ಕೆಲ ದೃಶ್ಯತುಣುಕುಗಳೂ ಇವೆ. ಕೊನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೀಪ ಬೆಳಗಿಸುತ್ತಿರುವ ಕ್ಲಿಪ್ ಅನ್ನು ಸೇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.