ADVERTISEMENT

ಕೇರಳ: ಮುಟ್ಟು; ಕೆಲ ಸರ್ಕಾರಿ ಶಾಲೆಗಳಲ್ಲಿ ‍ವಿದ್ಯಾರ್ಥಿನಿಯರ ವಿಶ್ರಾಂತಿಗೆ ಕೊಠಡಿ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 14:35 IST
Last Updated 11 ನವೆಂಬರ್ 2025, 14:35 IST
...
...   

ತಿರುವನಂತಪುರ: ಮುಟ್ಟಿನ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ವಿಶ್ರಾಂತಿ ಪಡೆಯಲು ಕೇರಳದ ಕಟ್ಟಾಕಡ ವಿಧಾನಸಭಾ ಕ್ಷೇತ್ರದ ಸರ್ಕಾರಿ ಶಾಲೆಗಳಲ್ಲಿ ‍ಪ್ರತ್ಯೇಕ ಕೊಠಡಿಗಳನ್ನು ನಿರ್ಮಿಸಲಾಗಿದ್ದು, ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. 

ಸರ್ಕಾರಿ ಮತ್ತು ಖಾಸಗಿ ವಲಯದ ಮಹಿಳಾ ಉದ್ಯೋಗಿಗಳಿಗೆ ತಿಂಗಳಲ್ಲಿ ಒಂದು ದಿನ ಮುಟ್ಟಿನ ರಜೆಯ ಸೌಲಭ್ಯ ಘೋಷಿಸಿರುವ ಕರ್ನಾಟಕ ಸರ್ಕಾರದ ನಿರ್ಧಾರವು ಹಲವು ಆಯಾಮದ ಚರ್ಚೆಗಳಿಗೆ ಗ್ರಾಸವಾಗಿರುವಾಗಲೇ ಈ ಬೆಳವಣಿಗೆಯೂ ನಡೆದಿದೆ. 

ಕಟ್ಟಾಕಡ ಕ್ಷೇತ್ರದಲ್ಲಿರುವ ಎಲ್ಲಾ 16 ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ (ಪ್ರೌಢಶಾಲೆ ಮತ್ತು 11–12ನೇ ತರಗತಿ) ವಿದ್ಯಾರ್ಥಿನಿಯರು ಮುಟ್ಟಿನ ಸಂದರ್ಭದಲ್ಲಿ ವಿಶ್ರಾಂತಿ ಪಡೆಯಲು ವಿಶೇಷ ಕೊಠಡಿಗಳನ್ನು ನಿರ್ಮಿಸಲಾಗಿದೆ. 

ADVERTISEMENT

 ‘ಒಪ್ಪಂ’ ಎಂಬ ಉಪಕ್ರಮದ ಭಾಗವಾಗಿ ಕಟ್ಟಾಕಡ ಕ್ಷೇತ್ರದಲ್ಲಿ ಮಹಿಳೆಯರ ಸಬಲೀಕರಣವನ್ನು ಖಾತರಿಪಡಿಸಿಕೊಳ್ಳಲು ಶಾಸಕ ಐ.ಬಿ.ಸತೀಶ್‌ ಅವರು ಈ ವಿಶ್ರಾಂತ ಕೊಠಡಿಗಳ ನಿರ್ಮಾಣದ ಯೋಜನೆಯನ್ನು ಜಾರಿಗೊಳಿಸಿದ್ದಾರೆ. 

‘ಕೊಠಡಿಯಲ್ಲಿ ಎರಡು ಹಾಸಿಗೆ, ಕುರ್ಚಿಗಳು, ಬಿಸಿನೀರಿನ ಬ್ಯಾಗ್‌, ನ್ಯಾ‍ಪ್ಕಿನ್‌ ವೆಂಡಿಂಗ್‌ ಮಷಿನ್‌ ಇದೆ. ಅಲ್ಲದೇ, ಮನಃಶಾಸ್ತ್ರಜ್ಞರ ಸಲಹೆಯಂತೆ ಮನಸ್ಸಿಗೆ ಮುದ ನೀಡುವಂಥ ಬಣ್ಣಗಳನ್ನು ಕೊಠಡಿಯ ಗೋಡೆಗಳಿಗೆ ಬಳಿಯಲಾಗಿದೆ’ ಎಂದು ಸತೀಶ್‌ ಮಾಹಿತಿ ನೀಡಿದ್ದಾರೆ.

ಈ ಉಪಕ್ರಮದಿಂದ ಬರೀ ವಿದ್ಯಾರ್ಥಿನಿಯರಿಗೆ ಮಾತ್ರವಲ್ಲ, ತಮಗೂ ಸಹಕಾರಿಯಾಗಿದೆ ಎಂದು ಹಲವು ಶಿಕ್ಷಕಿಯರು ಹೇಳುತ್ತಿದ್ದಾರೆ ಎಂದೂ ಸತೀಶ್‌ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.