ADVERTISEMENT

ಮೆಸ್ಸಿ ಕಾರ್ಯಕ್ರಮ ಅವ್ಯವಸ್ಥೆ: ₹50 ಕೋಟಿ ಮಾನನಷ್ಟ ದಾವೆ ಹೂಡಿದ ಸೌರವ್ ಗಂಗೂಲಿ

ಪಿಟಿಐ
Published 19 ಡಿಸೆಂಬರ್ 2025, 10:28 IST
Last Updated 19 ಡಿಸೆಂಬರ್ 2025, 10:28 IST
<div class="paragraphs"><p>ಲಯೊನೆಲ್ ಮೆಸ್ಸಿ ಕೋಲ್ಕತ್ತ ಭೇಟಿ ವೇಳೆ ಸಾಲ್ಟ್ ಲೇಕ್ ಮೈದಾನದಲ್ಲಿ ಉಂಟಾದ ಅವ್ಯವಸ್ಥೆ ಹಾಗೂ ಸೌರವ್ ಗಂಗೂಲಿ</p></div>

ಲಯೊನೆಲ್ ಮೆಸ್ಸಿ ಕೋಲ್ಕತ್ತ ಭೇಟಿ ವೇಳೆ ಸಾಲ್ಟ್ ಲೇಕ್ ಮೈದಾನದಲ್ಲಿ ಉಂಟಾದ ಅವ್ಯವಸ್ಥೆ ಹಾಗೂ ಸೌರವ್ ಗಂಗೂಲಿ

   

– ಪಿಟಿಐ ಚಿತ್ರಗಳು

ಕೋಲ್ಕತ್ತ: ಫುಟ್‌ಬಾಲ್ ಆಟಗಾರ ಲಯೊನೆಲ್ ಮೆಸ್ಸಿ ಕೋಲ್ಕತ್ತ ಭೇಟಿ ವೇಳೆ ಸಾಲ್ಟ್ ಲೇಕ್ ಮೈದಾನದಲ್ಲಿ ಉಂಟಾದ ಅವ್ಯವಸ್ಥೆಗೆ ತನ್ನ ಹೆಸರನ್ನು ತಳುಕುಹಾಕಿ ಸಾರ್ವಜನಿಕವಾಗಿ ಅವಹೇಳನಕಾರಿ ಮತ್ತು ಮಾನಹಾನಿಕರ ಹೇಳಿಕೆ ನೀಡಿದ ಫುಟ್‌ಬಾಲ್ ಕ್ಲಬ್ ವಿರುದ್ಧ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸೌರವ್ ಗಂಗೂಲಿ ₹ 50 ಕೋಟಿಯ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ADVERTISEMENT

‘ಅರ್ಜೆಂಟಿನಾ ಫುಲ್‌ಬಾಲ್ ಕ್ಲಬ್‌’ನ ಉತ್ತಮ್ ಸಾಹಾ ವಿರುದ್ಧ ಗುರುವಾರ ಪೊಲೀಸ್ ದೂರು ದಾಖಲಿಸಿದ್ದಾರೆ.

‘ಪೊಲೀಸ್ ದೂರಿನ ಜೊತೆಗೆ, ಫುಟ್‌ಬಾಲ್ ಕ್ಲಬ್‌ನ ಅಧಿಕಾರಿಗಳಿಗೆ ₹ 50 ಕೋಟಿಯ ಕಾನೂನು ನೋಟಿಸ್ ಕಳುಹಿಸಿದ್ದೇನೆ. ಅವರು ಬಾಯಿಗೆ ಬಂದ ಹಾಗೆ ಮಾತನಾಡಿದ್ದಾರೆ’ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.

‘ಮೆಸ್ಸಿ ಅವರ ‘ಗೋಟ್’ ಪ್ರವಾಸದ ನಿಜವಾದ ರೂವಾರಿ ಸೌರವ್ ಗಂಗೂಲಿ, ಆದರೆ ಈಗ ಬಂಧಿತರಾಗಿರುವ ಪ್ರಮುಖ ಆಯೋಜಕ ಸತಾದ್ರು ದತ್ತಾ ಕೇವಲ ಮುಖ ಮಾತ್ರ’ ಎಂದು ಕೆಲ ದಿನಗಳ ಹಿಂದೆ ಪತ್ರಕರ್ತರೊಂದಿಗೆ ಮಾತನಾಡುವಾಗ ಸಾಹಾ ಹೇಳಿದ್ದರು.

ಕೋಲ್ಕತ್ತ ಸೈಬರ್ ಪೊಲೀಸರಿಗೆ ಇ–ಮೇಲ್ ಮೂಲಕ ದೂರು ಕಳುಹಿಸಿರುವ ಗಂಗೂಲಿ, ವ್ಯಕ್ತಿಯ ಹೇಳಿಕೆಗಳು ನನ್ನ ಖ್ಯಾತಿ ಹಾಗೂ ಮಾನಸಿಕ ನೆಮ್ಮದಿ ಮೇಲೆ ಪ್ರತೀಕೂಲ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.

‘ಗಂಗೂಲಿ ವಿರುದ್ಧ ಯಾವುದೇ ಆಧಾರಗಳು ಇಲ್ಲದೆ ಉದ್ದೇಶಪೂರ್ವಕವಾಗಿ ಅ‍ಪಾದನೆಗಳನ್ನು ಮಾಡಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದು, ಈ ಬಗ್ಗೆ ತನಿಖೆ ಪ್ರಗತಿಯಲ್ಲಿದೆ ಎಂದಿದ್ದಾರೆ.

‘ಆಧಾರರಹಿತ ಆರೋಪವು ಕಷ್ಟಪಟ್ಟು ಸಂಪಾದಿಸಿದ ಖ್ಯಾತಿಗೆ ಕಳಂಕ ತರುವ ಉದ್ದೇಶ ಹೊಂದಿದೆ’ ಎಂದು ದೂರಿನಲ್ಲಿ ಗಂಗೂಲಿ ತಿಳಿಸಿದ್ದಾರೆ.

ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯೊಂದಿಗೆ ಸೌರವ್ ಗಂಗೂಲಿ ಕೂಡ ಭಾಗಿಯಾಗಬೇಕಿತ್ತು. ಆದರೆ ಅಭಿಮಾನಿಗಳ ಆಕ್ರೋಶದಿಂದ ಮೈದಾನದಲ್ಲಿ ಉಂಟಾದ ಅವ್ಯವಸ್ಥೆಯಿಂದಾಗಿ ಭಾಗಿಯಾಗಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.