
ನೆಮಿಸಿಯೊ ಒಸೆಗುರಾ
ಕೃಪೆ: ಎಕ್ಸ್
ಮೆಕ್ಸಿಕೊದ ಡ್ರಗ್ ಲಾರ್ಡ್ ಹಾಗೂ 'ಹಾಲಿಸ್ಕೊ ನ್ಯೂ ಜನರೇಷನ್ ಕಾರ್ಟೆಲ್' ನ ನಾಯಕ 'ನೆಮೆಸಿಯೊ ಒಸೆಗುರಾ ಸೆರ್ವಾಂಟೆಸ್'ನನ್ನು ಭಾನುವಾರ ಸೇನಾ ಕಾರ್ಯಾಚರಣೆ ನಡೆಸಿ ಹತ್ಯೆ ಮಾಡಲಾಗಿದೆ. ಹತ್ಯೆಯ ಬಳಿಕ ಆತನ ಸಹಚರರು ಮೆಕ್ಸಿಕೊದಲ್ಲಿ ದಂಗೆ ಎಬ್ಬಿಸಿದ್ದರು. ಈ ನಡುವೆ ಎಲ್ ಮೆಂಚೊ ಹತ್ಯೆಯ ಹಿಂದೆ ಆತನ ನಂಬಿಕಸ್ಥ ಗೆಳತಿ ಇರುವುದು ಬೆಳಕಿಗೆ ಬಂದಿದೆ.
ಎಲ್ ಮೆಂಚೊ, ಅಮೆರಿಕ ಮತ್ತು ಮೆಕ್ಸಿಕೊದಲ್ಲಿ ಮಾದಕ ಪದಾರ್ಥಗಳನ್ನು ಸರಬರಾಜು ಮಾಡುವ ದೊಡ್ಡ ಜಾಲವನ್ನು ಬೆಳೆಸಿದ್ದ. ಅಮೆರಿಕ ಹಾಗೂ ಮೆಕ್ಸಿಕೊ ಪಡೆಗಳ ಮೋಸ್ಟ್ ವಾಂಟೆಂಡ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದ ಈತನ ಹತ್ಯೆಗೆ ಸಾಕಷ್ಟು ಬಾರಿ ಪ್ರಯತ್ನಗಳು ನಡೆದಿದ್ದವು. ಪ್ರತಿ ಬಾರಿಯೂ ತಪ್ಪಿಸಿಕೊಳ್ಳುತ್ತಿದ್ದನು. ಹಾಗಾಗಿ, ಆತನ ಕುರಿತು ಸುಳಿವು ಕೊಟ್ಟವರಿಗೆ ಅಮೆರಿಕ ಸರ್ಕಾರವು ₹125 ಕೋಟಿ ಬಹುಮಾನ ಘೋಷಣೆ ಮಾಡಿತ್ತು.
ಗೆಳತಿಯಿಂದಲೇ ಸಂಚು
ರಕ್ಷಣಾ ಪಡೆಗಳಿಗೆ ಎಲ್ ಮೆಂಚೊ ಅಡಗು ತಾಣಗಳ ಕುರಿತು ಆತನ ಗೆಳತಿಯೇ ಮಾಹಿತಿ ಕೊಟ್ಟಿದ್ದಳು. ಆಕೆ ನೀಡಿದ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನೆಡೆಸಿದ ಸೇನೆ ಎಲ್ ಮೆಂಚೊನನ್ನು ಹತ್ಯೆಗೈದಿವೆ ಎಂದು ಮೆಕ್ಸಿಕನ್ ರಕ್ಷಣಾ ಕಾರ್ಯದರ್ಶಿ ಜನರಲ್ ರಿಕಾರ್ಡೊ ಟ್ರೆವಿಲ್ಲಾ ಹೇಳಿದ್ದಾರೆ.
ಆತನ ಗೆಳತಿ ನೀಡಿದ ಮಾಹಿತಿ ಆಧರಿಸಿದ ರಕ್ಷಣಾ ಪಡೆಗಳು, ಭಾನುವಾರ ಕಾರ್ಯಾಚರಣೆ ನಡೆಸಲು ಯೋಜನೆ ರೂಪಿಸಿದ್ದರು. ಅದರಂತೆ ಎಲ್ ಮೆಂಚೊ, ಮೆಕ್ಸಿಕೊದ ಟಪಲ್ಪಾದಲ್ಲಿರುವ ರೆಸಾರ್ಟ್‌ಗೆ ಗೆಳತಿ ಜೊತೆ ಬರುತ್ತಾನೆ. ಬಳಿಕ ಆಕೆ ರೆಸಾರ್ಟ್‌ನಿಂದ ಹೊರಬರುತ್ತಿದ್ದಂತೆ ಕಾರ್ಯಾಚರಣೆ ನಡೆಸಿ ಹತ್ಯೆಗೈಯಲಾಗಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ ಮೆಂಚೊ ಗ್ಯಾಂಗ್ ಜೊತೆ ನಡೆದ ಗುಂಡಿನ ಚಕಮುಕಿಯಲ್ಲಿ 50ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅದರಲ್ಲಿ 25 ಮೆಕ್ಸಿಕನ್ ಸೈನಿಕರು ಹಾಗೂ ಭದ್ರತಾ ಅಧಿಕಾರಿಗಳು ಸೇರಿದ್ದಾರೆ. ಓರ್ವ ಗರ್ಭಿಣಿ ಮಹಿಳೆ ಸೇರಿ ನಾಗರಿಕರು ಸಹ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.