ADVERTISEMENT

ಗಾಂಧಿ ಹೆಸರಿಲ್ಲದ ವಿಬಿ–ಜಿ ರಾಮ್‌ ಜಿ ಮಸೂದೆಗೆ ಲೋಕಸಭೆಯಲ್ಲಿ ಬಹುಮತದ ಒಪ್ಪಿಗೆ

ಪಿಟಿಐ
Published 18 ಡಿಸೆಂಬರ್ 2025, 11:38 IST
Last Updated 18 ಡಿಸೆಂಬರ್ 2025, 11:38 IST
<div class="paragraphs"><p>ಮಸೂದೆ ಮೇಲೆ ಲೋಕಸಭೆಯಲ್ಲಿ ಮಾತನಾಡಿದ&nbsp;ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್</p></div>

ಮಸೂದೆ ಮೇಲೆ ಲೋಕಸಭೆಯಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್

   

- ಎಕ್ಸ್ ಚಿತ್ರ

ನವದೆಹಲಿ: ‘ನರೇಗಾ’ ಯೋಜನೆಗೆ ಪರ್ಯಾಯವಾಗಿ ರೂಪಿಸಿರುವ ‘ವಿಕಸಿತ ಭಾರತ– ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್‌ (ಗ್ರಾಮೀಣ) (ವಿಬಿ–ಜಿ ರಾಮ್‌ ಜಿ) ಮಸೂದೆಯನ್ನು ವಿರೋಧ ಪಕ್ಷಗಳ ತೀವ್ರ ಪ್ರತಿರೋಧದ ನಡುವೆ ಲೋಕಸಭೆಯಲ್ಲಿ ಗುರುವಾರ ಅಂಗೀಕರಿಸಲಾಯಿತು.

ADVERTISEMENT

ಮಸೂದೆ ಬಗ್ಗೆ ಸುಮಾರು ಎಂಟು ಗಂಟೆ ನಡೆದ ಚರ್ಚೆಗೆ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಉತ್ತರಿಸಿ, ‘ನರೇಂದ್ರ ಮೋದಿ ಸರ್ಕಾರವು ಮಹಾತ್ಮ ಗಾಂಧಿಯವರ ಆದರ್ಶಗಳನ್ನು ಎತ್ತಿಹಿಡಿಯುತ್ತದೆ’ ಎಂದು ಪ್ರತಿಪಾದಿಸಿದರು.

‘ಮಸೂದೆಯನ್ನು ವಿರೋಧಿಸುವ ಕಾಂಗ್ರೆಸ್‌ ಪಕ್ಷವು ಗಾಂಧೀಜಿ ಪ್ರತಿಪಾದಿಸಿದ ಆದರ್ಶಗಳನ್ನು ಹಲವು ಬಾರಿ ‘ಕೊಂದಿದೆ’ ಮತ್ತು ಅವರ ಹೆಸರನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದೆ’ ಎಂದು ಆರೋಪಿಸಿದರು.

ಚೌಹಾಣ್ ಅವರು ಮಾತನಾಡುತ್ತಿರುವಾಗ ವಿರೋಧ ಪಕ್ಷಗಳ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಮಸೂದೆಯ ಪ್ರತಿ ಹರಿದು ಹಾಕಿದರು. ಮಸೂದೆಗೆ ಅಂಗೀಕಾರ ಲಭಿಸಿದ ಕೂಡಲೇ ಸ್ಪೀಕರ್ ಓಂ ಬಿರ್ಲಾ ಅವರು ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಿದರು. ಸಂಸತ್ತಿನ ಚಳಿಗಾಲದ ಅಧಿವೇಶನ ಶುಕ್ರವಾರ ಕೊನೆಗೊಳ್ಳಲಿದೆ.

ಗ್ರಾಮೀಣ ಭಾಗದ ಬಡ ಜನರಿಗೆ ಉದ್ಯೋಗ ಖಾತರಿಪಡಿಸುವ ‘ನರೇಗಾ’ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ) ಯೋಜನೆಯಿಂದ ಗಾಂಧೀಜಿ ಹೆಸರು ಕೈಬಿಟ್ಟಿರುವುದಕ್ಕೆ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದವು.

ವಿಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ ಚೌಹಾಣ್, ‘ಎನ್‌ಡಿಎಯು ಪ್ರಧಾನ ಮಂತ್ರಿ ಆವಾಸ್ ಯೋಜನೆ ಮೂಲಕ ನಿರ್ಮಿಸಿರುವ ಮನೆಗಳು, ಉಜ್ವಲ ಯೋಜನೆ, ಸ್ವಚ್ಛ ಭಾರತ ಮಿಷನ್ ಮತ್ತು ಆಯುಷ್ಮಾನ್ ಭಾರತ್ ಅಡಿಯಲ್ಲಿ ಗಾಂಧೀಜಿ ಅವರ ಆದರ್ಶಗಳು ಜೀವಂತವಾಗಿರುವುದನ್ನು ಖಚಿತಪಡಿಸಿದೆ’ ಎಂದು ಬಡವರ ಕಲ್ಯಾಣಕ್ಕಾಗಿ ಸರ್ಕಾರ ಜಾರಿಗೊಳಿಸಿದ ಯೋಜನೆಗಳನ್ನು ಪಟ್ಟಿ ಮಾಡಿದರು.

ಯುಪಿಎ ಆಳ್ವಿಕೆಯಲ್ಲಿ ‘ನರೇಗಾ’ ಯೋಜನೆ ಭ್ರಷ್ಟಾಚಾರದಿಂದ ತುಂಬಿತ್ತು. ಗೊತ್ತುಪಡಿಸಿದ ಕೆಲಸಗಳಿಗೆ ಸಾಮಗ್ರಿಗಳ ಖರೀದಿಗೆ ನಿರೀಕ್ಷಿತ ಪ್ರಮಾಣದ ಹಣವನ್ನು ಖರ್ಚು ಮಾಡಲಾಗಿಲ್ಲ ಎಂದು ಆರೋಪಿಸಿದರು.

₹10 – 11 ಲಕ್ಷ ಕೋಟಿಯನ್ನು ಕೇವಲ ವೇತನ ಪಾವತಿಸಲು ಖರ್ಚು ಮಾಡಬಾರದು. ಬದಲಾಗಿ, ಶಾಶ್ವತ ಆಸ್ತಿಗಳನ್ನು ಸೃಷ್ಟಿಸಲು ಬಳಸಬೇಕು ಎಂದು ಭಾವಿಸಿ ಆಳವಾದ ಚರ್ಚೆಯ ಬಳಿಕ ‘ಜಿ ರಾಮ್ ಜಿ’ ಮಸೂದೆಯನ್ನು ತರಲಾಗಿದೆ ಎಂದು ಸರ್ಕಾರದ ನಿರ್ಧಾರ ಸಮರ್ಥಿಸಿಕೊಂಡರು.

ಲೋಕಸಭೆ ಕಲಾಪದ ಬಳಿಕ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌ ಮತ್ತು ‘ಇಂಡಿ’ ಮೈತ್ರಿಕೂಟದ ಸದಸ್ಯರು ಸಂಸತ್ತಿನಲ್ಲಿ ತೋರಿದ ಅವಮಾನಕರ ವರ್ತನೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಕೆಟ್ಟ ನವಡಳಿಕೆ ಮೂಲಕ ಅವರು ಸಂಸದೀಯ ಸಂಪ್ರದಾಯಗಳನ್ನು ಮುರಿದಿದ್ದಾರೆ’ ಎಂದು ಟೀಕಿಸಿದರು. ಪ್ರತಿಪಕ್ಷಗಳ ಈ ರೀತಿಯ ‘ಅವಮಾನಕರ’ ನಡವಳಿಕೆಯನ್ನು ಬಾಪು ಅವರು ಒಪ್ಪಿಕೊಳ್ಳುವರೇ ಎಂದು ಪ್ರಶ್ನಿಸಿದರು.

ಮಸೂದೆ ಅಂಗೀಕರಿಸುವಾಗ ವಿಪಕ್ಷಗಳ ಸದಸ್ಯರ ವರ್ತನೆ ಗೂಂಡಾಗಿರಿಯಂತೆ ಇತ್ತು. ಅವರ ನಡವಳಿಕೆ ಪ್ರಜಾಪ್ರಭುತ್ವವನ್ನು ಅವಮಾನಿಸಿದೆ
ಶಿವರಾಜ್ ಸಿಂಗ್ ಚೌಹಾಣ್ ಗ್ರಾಮೀಣಾಭಿವೃದ್ಧಿ ಸಚಿವ

ಮನವಿ ತಿರಸ್ಕರಿಸಿದ ಸ್ಪೀಕರ್

  • ಮಸೂದೆಯನ್ನು ಸಂಸದೀಯ ಸ್ಥಾಯಿ ಸಮಿತಿಗೆ ಒಪ್ಪಿಸುವಂತೆ ಕಾಂಗ್ರೆಸ್‌ನ ಕೆ.ಸಿ.ವೇಣುಗೋಪಾಲ್‌ ಅವರಿಂದ ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಮನವಿ

  • ಎಂಟು ಗಂಟೆ ಚರ್ಚೆ ನಡೆದಿದ್ದು ವಿವಿಧ ಪಕ್ಷಗಳ 98 ಸದಸ್ಯರು ಮಸೂದೆ ಬಗ್ಗೆ ಮಾತನಾಡಿದ್ದಾರೆ ಎಂದು ಹೇಳಿ ಮನವಿ ತಳ್ಳಿಹಾಕಿದ ಸ್ಪೀಕರ್ ‌

  • ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಧ್ವನಿಮತದ ಮೂಲಕ ಮಸೂದೆಗೆ ಅಂಗೀಕಾರ

ಮೋದಿ ಸರ್ಕಾರವು ರಾಷ್ಟ್ರಪಿತ ಗಾಂಧೀಜಿಯನ್ನು ಅವಮಾನಿಸಿದೆಯಲ್ಲದೆ ಭಾರತದ ಹಳ್ಳಿಗಳಲ್ಲಿ ಸಾಮಾಜಿಕ-ಆರ್ಥಿಕ ಪರಿವರ್ತನೆಗೆ ಕಾರಣವಾದ ಯೋಜನೆಯನ್ನು ಹತ್ತಿಕ್ಕಿದೆ. ಸರ್ವಾಧಿಕಾರಿ ಧೋರಣೆಯ ಸರ್ಕಾರದ ಈ ದಬ್ಬಾಳಿಕೆಯ ವಿರುದ್ಧ ನಾವು ಬೀದಿಗಿಳಿದು ಹೋರಾಡುತ್ತೇವೆ. ಇದು ‘ನರೇಗಾ’ದ ಮರುನಾಮಕರಣವಷ್ಟೇ ಅಲ್ಲ. ಬದಲಾಗಿ ಇದು ವಿಶ್ವದ ಅತಿದೊಡ್ಡ ಉದ್ಯೋಗ ಯೋಜನೆಯ ವ್ಯವಸ್ಥಿತ ಕೊಲೆಯಾಗಿದೆ
ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ
ಎಲ್ಲ ವಿರೋಧ ಪಕ್ಷಗಳು ಈ ಮಸೂದೆಯನ್ನು ಬಲವಾಗಿ ವಿರೋಧಿಸುತ್ತವೆ. ಕೆಲಸದ ದಿನಗಳನ್ನು 100ರಿಂದ 125ಕ್ಕೆ ಹೆಚ್ಚಿಸಿರುವುದು ಜನರ ಕಣ್ಣಿಗೆ ಮಣ್ಣೆರಚುವ ತಂತ್ರವಲ್ಲದೆ ಬೇರೇನೂ ಅಲ್ಲ. ಮುಂದಿನ ಕೆಲವು ದಿನಗಳಲ್ಲಿ ಈ ಉದ್ಯೋಗ ಖಾತರಿ ಯೋಜನೆಯ ಅಂತ್ಯ ಖಚಿತ ಎಂಬುದು ಈ ಮಸೂದೆಯನ್ನು ಎಚ್ಚರಿಕೆಯಿಂದ ಓದುವ ಯಾರಿಗಾದರೂ ತಿಳಿಯುತ್ತದೆ. ರಾಜ್ಯಗಳ ಮೇಲೆ ಹೊರೆ ಬಿದ್ದ ತಕ್ಷಣ ಯೋಜನೆ ನಿಧಾನವಾಗಿ ಹಳ್ಳ ಹಿಡಿಯುತ್ತದೆ. ಏಕೆಂದರೆ ರಾಜ್ಯ ಸರ್ಕಾರಗಳ ಬಳಿ ಸಾಕಷ್ಟು ಹಣವಿಲ್ಲ
ಪ್ರಿಯಾಂಕಾ ಗಾಂಧಿ ಕಾಂಗ್ರೆಸ್‌ ನಾಯಕಿ

ವಿಪಕ್ಷ ಸದಸ್ಯರಿಂದ ಪ್ರತಿಭಟನೆ

‘ಜಿ ರಾಮ್‌ ಜಿ’ ಮಸೂದೆಯನ್ನು ವಿರೋಧಿಸಿ ವಿರೋಧ ಪಕ್ಷಗಳ ಹಲವು ಸದಸ್ಯರು ‘ಮಹಾತ್ಮ ಗಾಂಧಿ ನರೇಗಾ’ ಎಂಬ ಬರಹ ಇದ್ದ ಬ್ಯಾನರ್‌ ಹಿಡಿದು ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ‘ಮೋದಿ ಸರ್ಕಾರವು ಮಹಾತ್ಮ ಗಾಂಧಿ ಅವರಿಗೆ ಮಾಡಿದ ಅವಮಾನವನ್ನು ದೇಶವು ಸಹಿಸುವುದಿಲ್ಲ’ ಎಂದು ಘೋಷಣೆ ಕೂಗಿದರು. ಪ್ರೇರಣಾ ಸ್ಥಳದಲ್ಲಿರುವ ಗಾಂಧಿ ಪ್ರತಿಮೆ ಬಳಿಯಿಂದ ಮಕರ ದ್ವಾರದವರೆಗೆ ಪ್ರತಿಭಟನಾ ಜಾಥಾ ನಡೆಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಡಿಎಂಕೆಯ ಕನಿಮೊಳಿ ಟಿ.ಆರ್‌.ಬಾಲು ಎ.ರಾಜಾ ಐಯುಎಂಎಲ್‌ನ ಇ.ಟಿ.ಮೊಹಮ್ಮದ್‌ ಬಶೀರ್ ಮತ್ತು ಶಿವಸೇನಾದ (ಯುಬಿಟಿ) ಅರವಿಂದ ಸಾವಂತ್ ಸೇರಿದಂತೆ ಹಲವರು ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.