ADVERTISEMENT

ಇಸ್ರೇಲ್ ಸೇನೆ ಜೊತೆ ಒಪ್ಪಂದ: ಮೈಕ್ರೊಸಾಫ್ಟ್ 50ನೇ ವರ್ಷಾಚರಣೆಗೆ ಪ್ರತಿಭಟನೆ ಬಿಸಿ

ಏಜೆನ್ಸೀಸ್
Published 5 ಏಪ್ರಿಲ್ 2025, 14:45 IST
Last Updated 5 ಏಪ್ರಿಲ್ 2025, 14:45 IST
<div class="paragraphs"><p>ಮೈಕ್ರೊಸಾಫ್ಟ್‌</p></div>

ಮೈಕ್ರೊಸಾಫ್ಟ್‌

   

ವಾಷಿಂಗ್ಟನ್: ಮೈಕ್ರೊಸಾಫ್ಟ್‌ ಉದ್ಯೋಗಿಗಳು ಪ್ಯಾಲೆಸ್ಟೀನಿಯರ ಪರ ನಡೆಸಿದ ಪ್ರತಿಭಟನೆ ಶುಕ್ರವಾರ ಕಂಪನಿಯ 50ನೇ ವಾರ್ಷಿಕೋತ್ಸವ ಆಚರಣೆಗೆ ಅಡ್ಡಿಪಡಿಸಿತು. ಇಸ್ರೇಲ್‌ ಸೇನೆಗೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಪೂರೈಸಲು ‘ಮೈಕ್ರೋಸಾಫ್ಟ್‌ ಟೆಕ್‌‘ ಮಾಡಿಕೊಂಡಿರುವ ಒಪ್ಪಂದಕ್ಕೆ ಉದ್ಯೋಗಿಗಳು ವಿರೋಧ ವ್ಯಕ್ತಪಡಿಸಿದರು.

ಮೈಕ್ರೊಸಾಫ್ಟ್ ಎಐ ಸಿಇಒ ಮುಸ್ತಫಾ ಸುಲೇಮಾನ್ ಅವರು, ಕಂಪನಿಯ ಎಐ ಉತ್ಪನ್ನ ಕೋಪಿಲೋಟ್‌ ಮತ್ತು ಕಂಪನಿಯ ದೀರ್ಘಾವಧಿಯ ಯೋಜನೆಗಳ ಬಗ್ಗೆ ವಿಷಯ ಮಂಡಿಸುತ್ತಿದ್ದಾಗ ಪ್ರತಿಭಟನೆ ಶುರುವಾಯಿತು. ಸಭಾಂಗಣದಲ್ಲಿ ‌ಮೈಕ್ರೊಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಮತ್ತು ಮಾಜಿ ಸಿಇಒ ಸ್ಟೀವ್ ಬಾಲ್ಮರ್ ಕೂಡ ಇದ್ದರು.

ADVERTISEMENT

ವೇದಿಕೆಯತ್ತ ತೆರಳಿದ ಉದ್ಯೋಗಿ ಇಬ್ತಿಹಾಲ್‌ ಅಬೌಸಾದ್‌, ‘ಮುಸ್ತಫಾ ನಿಮಗೆ ನಾಚಿಕೆಯಾಗಬೇಕು’ ಎಂದು ಕೂಗಿದರು. ಆಗ ಮುಸ್ತಾಫಾ ಭಾಷಣ ನಿಲ್ಲಿಸಿದರು. ‘ನೀವು ಒಳ್ಳೆಯದಕ್ಕಾಗಿ ಎಐ ಬಳಸುತ್ತೇವೆ ಎಂದು ಹೇಳಿಕೊಳ್ಳುತ್ತೀರಿ. ಆದರೆ, ಇಸ್ರೇಲ್‌ ಸೇನೆಗೆ ಎಐ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಿ, ನಮ್ಮ ಪ್ರದೇಶದಲ್ಲಿ ನರಮೇಧಕ್ಕೆ ಅವಕಾಶ ಮಾಡಿಕೊಟ್ಟಿದ್ದೀರಿ’ ಎಂದು ಇಬ್ತಿಹಾಲ್‌ ಆಕ್ರೋಶ ವ್ಯಕ್ತಪಡಿಸಿದರು. ಆಗ ಮುಸ್ತಾಫಾ ಅವರು ‘ನಿಮ್ಮ ಪ್ರತಿಭಟನೆಗೆ ಧನ್ಯವಾದಗಳು. ನಾನು ನಿಮ್ಮ ಮಾತನ್ನು ಆಲಿಸುತ್ತಿದ್ದೇನೆ’ ಎಂದರು.

ವಾಗ್ದಾಳಿ ಮುಂದುವರಿಸಿದ ಇಬ್ತಿಹಾಲ್‌ ‘ಮೈಕ್ರೋಸಾಫ್ಟ್‌ ಮತ್ತು ಮುಸ್ತಾಫಾ ನಿಮ್ಮೆಲ್ಲರ ಕೈಗಳಿಗೆ ರಕ್ತ ಅಂಟಿದೆ’ ಎಂದು ಕೂಗಿ, ಪ್ಯಾಲೆಸ್ಟೀನಿಯನ್ನರ ಬೆಂಬಲಾರ್ಥ ಕೆಫಿಯೆಹ್ ಸ್ಕಾರ್ಫ್ ಅನ್ನು ವೇದಿಕೆಯತ್ತ ಎಸೆದರು.

ಬಿಲ್‌ ಗೇಟ್ಸ್, ಬಾಲ್ಮರ್ ಮತ್ತು ಕಂಪನಿ ಸಿಇಒ ಸತ್ಯ ನಾದೆಲ್ಲಾ ಅವರು ವೇದಿಕೆಯಲ್ಲಿದ್ದ ಮತ್ತೊಂದು ಕಾರ್ಯಕ್ರಮಕ್ಕೆ ಮತ್ತೊಬ್ಬ ಉದ್ಯೋಗಿ ವನಿಯಾ ಅಗ್ರವಾಲ್ ಅಡ್ಡಿಪಡಿಸಿದರು.  ಕೆಲವು ಉದ್ಯೋಗಿಗಳು ಸಭಾಂಗಣದ ಹೊರಗೆ ರ‍್ಯಾಲಿ ಕೂಡ ನಡೆಸಿದರು. 

‘ಕಂಪನಿಯು ಇದುವರೆಗೆ ನಮ್ಮಿಂದ ಯಾವುದೇ ವಿವರಣೆ ಕೇಳಿಲ್ಲ. ಪ್ರತಿಭಟನೆಯ ನಂತರ ನಮ್ಮಿಬ್ಬರ ಕೆಲಸದ ಖಾತೆಗಳನ್ನು ನಿರ್ಬಂಧಿಸಲಾಗಿದೆ. ಲಾಗ್‌ ಇನ್‌ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ಇಬ್ತಿಹಾಲ್‌ ಅಬೌಸಾದ್‌ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.