ADVERTISEMENT

ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ: ಆರೋಪಿಗೆ ಜಾಮೀನು ನಿರಾಕರಣೆ

ಪಿಟಿಐ
Published 11 ಜನವರಿ 2023, 15:40 IST
Last Updated 11 ಜನವರಿ 2023, 15:40 IST
   

ನವದೆಹಲಿ: ಏರ್ ಇಂಡಿಯಾ ವಿಮಾನದ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿದ್ದ ಹಿರಿಯ ಮಹಿಳೆ ಮೇಲೆ ಮದ್ಯದ ಅಮಲಿನಲ್ಲಿ ಮೂತ್ರ ವಿಸರ್ಜನೆ ಮಾಡಿದ್ದ ಪ್ರಕರಣದ ಆರೋಪಿ ಶಂಕರ್‌ ಮಿಶ್ರಾಗೆ ಇಲ್ಲಿನ ನ್ಯಾಯಾಲಯವು ಬುಧವಾರ ಜಾಮೀನು ನಿರಾಕರಿಸಿದೆ.

ಜಾಮೀನು ಕೋರಿ ಆರೋಪಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಕೋಮಲ್‌ ಗರ್ಗ್‌ ಅವರು, ‘ಈ ಹಂತದಲ್ಲಿ ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸುವುದು ಸೂಕ್ತವಲ್ಲ’ ಎಂದರು.

‘ನನ್ನ ಕಕ್ಷಿದಾರರ ವರ್ತನೆಯು ಲೈಂಗಿಕ ಬಯಕೆಯಿಂದ ಕೂಡಿರಲಿಲ್ಲ. ದೂರುದಾರರ ಗೌರವಕ್ಕೆ ಚ್ಯುತಿ ತರುವ ದುರುದ್ದೇಶವನ್ನೂ ಹೊಂದಿರಲಿಲ್ಲ. ಅವರು ಈಗಾಗಲೇ ಸಾಕಷ್ಟು ನೊಂದಿದ್ದಾರೆ. ಅವರನ್ನು ಕೆಲಸದಿಂದಲೂ ವಜಾಗೊಳಿಸಲಾಗಿದೆ. ಹೀಗಾಗಿ ಜಾಮೀನು ಮಂಜೂರು ಮಾಡಬೇಕು’ ಎಂದು ಮಿಶ್ರಾ ಪರ ವಕೀಲರು ಮನವಿ ಮಾಡಿದ್ದರು.

ADVERTISEMENT

ದೂರುದಾರ ಮಹಿಳೆ ಪರ ವಕೀಲರು ಜಾಮೀನು ನೀಡದಂತೆ ಒತ್ತಾಯಿಸಿದ್ದರು. ‘ನನ್ನ ಕಕ್ಷಿದಾರರಿಗೆ ಪ್ರತಿನಿತ್ಯವೂ ಬೆದರಿಕೆಯ ಸಂದೇಶಗಳನ್ನು ರವಾನಿಸಲಾಗುತ್ತಿದೆ. ಮನೆಗೆ ನುಗ್ಗಿ ಬೆದರಿಕೆ ಹಾಕಲಾಗಿದೆ’ ಎಂದು ತಿಳಿಸಿದ್ದರು.

ದೆಹಲಿ ಪೊಲೀಸರೂ ಜಾಮೀನು ಅರ್ಜಿಗೆ ವಿರೋಧ ವ್ಯಕ್ತಪಡಿಸಿದ್ದರು.

‘ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಆರೋಪಿಯನ್ನು ಪೊಲೀಸರ ವಶಕ್ಕೆ ನೀಡಲು ನಿರಾಕರಿಸಿದ್ದು, ಅದರ ವಿರುದ್ಧ ಮರುಪರಿಶೀಲನಾ ಅರ್ಜಿ ಸಲ್ಲಿಸಲಾಗಿದೆ. ವಿಮಾನದ ಕ್ಯಾಪ್ಟನ್‌, ಕ್ಯಾಬಿನ್‌ ಸಿಬ್ಬಂದಿ ಸೇರಿದಂತೆ ಇನ್ನೂ ಹಲವು ಮಂದಿ ಪ್ರತ್ಯಕ್ಷದರ್ಶಿಗಳನ್ನು ವಿಚಾರಣೆಗೆ ಒಳಪಡಿಸಬೇಕಿದೆ’ ಎಂದು ಪೊಲೀಸರ ಪರ ವಕೀಲರು ನ್ಯಾಯಪೀಠಕ್ಕೆ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.